ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಆರೋಪದಡಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು‌ ಹೈಕೋರ್ಟ್ ರದ್ದುಪಡಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಿವಶಂಕರಪ್ಪ ಎಸ್. ಸಾಹುಕಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.

ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಸಚಿವ ಸಂಪುಟದ ಸಲಹೆ ಮತ್ತು ಶಿಫಾರಸಿನ ಮೇರೆಗೆ ಅರ್ಜಿದಾರರನ್ನು ಅಮಾನತುಗೊಳಿಸಿಲ್ಲ‌. ಆದ್ದರಿಂದ, ಸಂವಿಧಾನದ 317(2)ನೇ ವಿಧಿಯ ಅಡಿ ಅಧಿಕಾರ ಚಲಾಯಿಸಿ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಪಡಿಸಿ ರಾಜ್ಯಪಾಲರು 2026ರ ಜನವರಿ 10ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ಆದೇಶಿಸಿತು. ಜತೆಗೆ, ನ್ಯಾಯಾಲಯದ ಈ ಆದೇಶದ ಪ್ರತಿ ದೊರೆತ 7 ದಿನಗಳ ಒಳಗೆ ಅರ್ಜಿದಾರರನ್ನು ಆಯೋಗದ ಅಧ್ಯಕ್ಷರ ಹುದ್ದೆಗೆ ಮರುನಿಯೋಜಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.

ಹುದ್ದೆ ಮರುಸ್ಥಾಪನೆಯಾದ ನಂತರ ಅರ್ಜಿದಾರರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಮತ್ತು ಅಧಿಕಾರ ಚಲಾಯಿಸಲು ಅರ್ಹರಾಗಿರುತ್ತಾರೆ ಹಾಗೂ ಅಮಾನತು ಆದೇಶದ ರದ್ದತಿಯಿಂದಾಗಿ ದೊರೆಯುವ ಎಲ್ಲ ಪೂರಕ ಸೇವಾ ಮತ್ತು ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು‌ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಅರ್ಜಿದಾರರು ತಮ್ಮ ಪುತ್ರಿಯರ ವಿರುದ್ಧ ಆಯೋಗ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾಗಲಿ, ಕ್ರಮ ಕೈಗೊಳ್ಳುವುದಾಗಲಿ ಅಥವಾ ಬೇರೆಯವರಿಂದ ಯಾವುದೇ ನಿರ್ದಿಷ್ಟ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮಾಡುವುದಾಗಲಿ ಮಾಡಬಾರದು ಎಂದು ನ್ಯಾಯಪೀಠ ನಿರ್ಬಂಧ ವಿಧಿಸಿದೆ.

ಕಾನೂನು ಪ್ರಕಾರ ಪ್ರಕ್ರಿಯೆ ಮುಂದುವರಿಸಬಹುದು:
ನ್ಯಾಯಾಲಯ ನೀಡಿರುವ ಈ ತೀರ್ಪು ಅರ್ಜಿದಾರರ ಅಮಾನತು ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಮಾತ್ರ ನಿರ್ಧರಿಸುತ್ತದೆಯೇ ಹೊರತು ಅರ್ಜಿದಾರರು ಅಥವಾ ಅವರ ಪುತ್ರಿಯರ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯನ್ನು ಯಾವುದೇ ರೀತಿಯಲ್ಲಿ ನಿರ್ಧರಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿರುವ ಹೈಕೋರ್ಟ್, ಅಗತ್ಯವಿದ್ದಲ್ಲಿ ಸಂವಿಧಾನ ಮತ್ತು ಈ ತೀರ್ಪಿನಲ್ಲಿ ಉಲ್ಲೇಖಿಸಿರುವ ಕಾನೂನಿಗೆ ಅ‌ನುಸಾರವಾಗಿ ಅಂದರೆ, ಸಂವಿಧಾನದ 317(2)ನೇ ವಿಧಿ ಅಡಿಯಲ್ಲಿ ಅಮಾನತು ಆದೇಶವನ್ನು ಸಚಿವ ಸಂಪುಟದ ಪೂರ್ವ ಸಲಹೆ ಮತ್ತು ಶಿಫಾರಸಿನ ಮೇರೆಗಷ್ಟೇ ಮಾಡಬಹುದಾಗಿದೆ ಎಂಬುದನ್ನು ಕಟ್ಟುನಿಟ್ಟಾಗಿ ಅನುಸರಿಸಿ ಹೊಸದಾಗಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಸಕ್ಷಮ ಪ್ರಾಧಿಕಾರಕ್ಕೆ ಮುಕ್ತ ಅವಕಾಶವಿರುತ್ತದೆ ಎಂದು ಹೇಳಿದೆ.

Related Articles

Comments (0)

Leave a Comment