ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಜಮೀನು ಹಂಚಿಕೆ ಆರೋಪ; ಖಾಸಗಿ ದೂರಿನ ಪ್ರತಿ ಸಲ್ಲಿಸಲು ದೂರುದಾರರಿಗೆ ಹೈಕೋರ್ಟ್ ಸೂಚನೆ
- by Prashanth Basavapatna
- August 18, 2026
- 16 Views
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬ ಸದಸ್ಯರ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿಯಮಬಾಹಿರವಾಗಿ ನಾಗರಿಕ ಸೌಲಭ್ಯ (ಸಿಎ) ನಿವೇಶನ ಹಾಗೂ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ವಿಚಾರಣಾ ನ್ಯಾಯಾಲಯದಲ್ಲಿ ಹೂಡಿರುವ ಖಾಸಗಿ ದೂರಿನ ಪ್ರತಿ ಸಲ್ಲಿಸುವಂತೆ ಪ್ರಕರಣದ ದೂರುದಾರರಿಗೆ ಹೈಕೋರ್ಟ್ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ದೂರಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸದೆ ತಾನೇ ನೇರವಾಗಿ ವಿಚಾರಣೆ ನಡೆಸಲು ನಿರ್ಧರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ದೂರುದಾರರೂ ಆದ ‘ಲಂಚ ಮುಕ್ತ ಕರ್ನಾಟಕ ವೇದಿಕೆ’ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿದಾರರಿಗೆ ಈ ಸೂಚನೆ ನೀಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅರ್ಜಿದಾರರು ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಪರಿಗಣಿಸಿದ ವಿಚಾರಣಾ ನ್ಯಾಯಾಲಯವು ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕಾಗಿತ್ತು. ಆದರೆ, ತಾನೇ ವಿಚಾರಣೆ ನಡೆಸಲು ಮುಂದಾಗಿದೆ. ದೂರಿನ ಜತೆಗೆ ಸಲ್ಲಿಸಿದ್ದ ಪ್ರಮಾಣಪತ್ರ ಕ್ರಮಬದ್ದವಾಗಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿಲ್ಲ. ಇದು ಕಾನೂನುಬಾಹಿರ ಕ್ರಮವಾಗಿದೆ. ಆ ಆದೇಶ ಮಾರ್ಪಡಿಸಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರಮಾಣಪತ್ರದಲ್ಲಿನ ಲೋಪ ಸರಿಪಡಿಸಬಹುದಲ್ಲವೇ ಎಂದು ಕೇಳಿತಲ್ಲದೆ, ವಿಚಾರಣಾ ನ್ಯಾಯಾಲಯದ ವಿಚಾರಣೆಯ ಬದಲು ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಲಾಗುವುದು ಎಂದು ಮೌಖಿಕವಾಗಿ ನುಡಿಯಿತಲ್ಲದೆ, ಖಾಸಗಿ ದೂರಿನ ಪ್ರತಿ ಹಾಜರುಪಡಿಸುವಂತೆ ಪ್ರಕರಣದ ಖಾಸಗಿ ದೂರುದಾರರೂ ಆದ ಅರ್ಜಿದಾರ ವಿಜಯರಾಘವ ಮರಾಠೆಗೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)