‘ಸಿಎಸ್‌ಕೆ ಕಂಫರ್ಟ್ಸ್’ ಲಾಡ್ಜ್ ಮಾಲೀಕನ ಮೇಲಿನ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು: ಲಾಡ್ಜ್ ಒಂದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) ತಂಡವಾದ ‘ಚೆನ್ನೈ ಸೂಪರ್ ಕಿಂಗ್ಸ್’ (ಸಿಎಸ್‌ಕೆ) ಹೆಸರು ಹೋಲುವಂತೆ ‘ಸಿಎಸ್‌ಕೆ ಕಂಫರ್ಟ್ಸ್’ ಎಂದು ಹೆಸರಿಟ್ಟಿದ್ದ ಕಾರಣಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀ‌ನು ಕೋರಿ ಆರೋಪಿಗಳಾದ ಸ್ವಾಮಿ ಹಾಗೂ ಸುಪ್ರೀತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಆರೋಪಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿಲ್ಲ ಹಾಗೂ ಲಾಡ್ಜ್ ಮಾಲೀಕರಿಗೆ ಸಣ್ಣಪುಟ್ಟ ಗಾಯಗಳಷ್ಟೇ ಆಗಿವೆ. ಆರೋಪಿಗಳು 2026ರ ಜೂನ್ 1ರಿಂದ ಬಂಧನದಲ್ಲಿದ್ದು, ತನಿಖೆಯ ಪ್ರಮುಖ ಭಾಗ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಅರ್ಜಿದಾರರು ಮಾಡಿರುವ ಮನವಿಯನ್ನು ಪುರಸ್ಕರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಇದೇ ವೇಳೆ, ಆರೋಪಿಗಳಿಬ್ಬರೂ ತಲಾ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬರ ಶ್ಯೂರಿಟಿ ಒದಗಿಸಬೇಕು. ಅಗತ್ಯವಿದ್ದಾಗ ವಿಚಾರಣಾ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗಬೇಕು ಹಾಗೂ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಬಾರದು ಎಂಬ ಷರತ್ತುಗಳನ್ನು ವಿಧಿಸಿದೆ.

ಪ್ರಕರಣವೇನು?
ಪ್ರಕರಣದ ಎಫ್‌ಐಆರ್ ಪ್ರಕಾರ, 2026ರ ಜೂನ್ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್ ಟೈಟನ್ಸ್ (ಜಿಟಿ) ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಪ್ರಕರಣದ ದೂರುದಾರರು ‘ಸಿಎಸ್‌ಕೆ ಕಂಫರ್ಟ್ಸ್’ ಹೆಸರಿನ ಲಾಡ್ಜ್ ನಡೆಸುತ್ತಿದ್ದರು. ಪಂದ್ಯ ಮುಗಿದ ನಂತರ, ಆರೋಪಿಗಳು ಲಾಡ್ಜ್ ಬಳಿ ಬಂದು ‘ಸಿಎಸ್‌ಕೆ’ ಎಂದು ಏಕೆ ಹೆಸರು ಏಕಿಟ್ಟಿದ್ದೀರಿ ಎಂದು ವಿಚಾರಿಸಿದ್ದರು. ಸಿಎಸ್‌ಕೆ ಕಂಫರ್ಟ್ಸ್ ಎಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವಲ್ಲ ಎಂದು ಮಾಲೀಕರು ಸ್ಪಷ್ಟಪಡಿಸಿದರೂ, ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ, ನಿಂದಿಸಿ, ಸ್ವತ್ತುಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 189(2)(ಅಕ್ರಮ ಕೂಟ), 189(4)(ಮಾರಕಾಸ್ತ್ರಗಳೊಂದಿಗೆ ಅಕ್ರಮ ಕೂಟ), 191(2)(ಗಲಭೆ), 352(ಉದ್ದೇಶಪೂರ್ವಕ ಅಪಮಾನ), 351(2)(ಕ್ರಿಮಿನಲ್ ಬೆದರಿಕೆ), 324(4)(ಆಸ್ತಿ ಹಾನಿ ಅಥವಾ ಆರ್ಥಿಕ ನಷ್ಟ ಉಂಟು ಮಾಡುವುದು), 109(1)(ಕೊಲೆ ಯತ್ನ), 54(ಅಪರಾಧಕ್ಕೆ ಪ್ರಚೋದನೆ), 115(2)(ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅರ್ಜಿದಾರರನ್ನು ಅದೇ ದಿನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

Related Articles

Comments (0)

Leave a Comment