ಅಖಂಡ ಭಾರತ ಸಂಕಲ್ಪ ದಿನ ಆಚರಣೆಗೆ ಅನುಮತಿ ನಿರಾಕರಣೆ; ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ
- by Jagan Ramesh
- August 10, 2026
- 8 Views
ಬೆಂಗಳೂರು: ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 14ರಂದು ಮೈಸೂರು ನಗರದಲ್ಲಿ ಹಿಂದು ಜಾಗರಣ ವೇದಿಕೆ ಹಮ್ಮಿಕೊಳ್ಳಲು ಉದ್ದೇಶಿಸಿರುವ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರು ಅನುಮತಿ ನಿರಾಕರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ಅನುಮತಿ ನಿಕಾಕರಿಸಿರುವ ಮೈಸೂರಿನ ಮಂಡಿ ಠಾಣೆ ಪೊಲೀಸರ ಕ್ರಮ ಪ್ರಶ್ನಿಸಿ ಕಾರ್ಯಕ್ರಮದ ಆಯೋಜಕರಾದ ಹಿಂದು ಜಾಗರಣ ವೇದಿಕೆ ಮೈಸೂರು ನಗರ ಸಂಚಾಲಕ ಎ.ವೈ ವಸಂತಕುಮಾರ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠದಲ್ಲಿ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದರು. ಆಗ ನ್ಯಾಯಪೀಠ, ಮಂಗಳವಾರ (ಆಗಸ್ಟ್ 11) ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಅರ್ಜಿಯಲ್ಲೇನಿದೆ?
ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಆಗಸ್ಟ್ 14ರಂದು ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಲಕನಗರದಲ್ಲಿ ಪಂಜಿನ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಪಂಜಿನ ಮೆರವಣಿಗೆ ಆರ್.ಎಂ.ಸಿ ಗಣೇಶ್ ದೇವಸ್ಥಾನದಿಂದ ಆರಂಭಗೊಂಡು, ಮಿಷನ್ ಆಸ್ಪತ್ರೆ ಸರ್ಕಲ್, ಸಡೆ ರಸ್ತೆ, ಮೀನಾ ಬಜಾರ್, ಸಿಸಿಬಿ ಪೊಲೀಸ್ ಠಾಣೆ ಸರ್ಕಲ್, ಲಷ್ಕರ್ ಪೊಲೀಸ್ ಠಾಣೆ ಸರ್ಕಲ್, ದೊಡ್ಡ ಗಡಿಯಾರ ಸರ್ಕಲ್ ಮೂಲಕ 2.5 ಕಿ.ಮೀ ಸಾಗಿ ಅಂತಿಮವಾಗಿ ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನ ಬಳಿ ಮುಕ್ತಾಯವಾಗಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಆಗಸ್ಟ್ 5ರಂದು ಕಾರ್ಯಕ್ರಮದ ವೇಳಾಪಟ್ಟಿ, ಭಿತ್ತಿಪತ್ರ ಮತ್ತಿತರ ವಿವರಗಳೊಂದಿಗೆ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು. ಮೆರವಣಿಗೆ ಮತ್ತು ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲಿದೆ ಮತ್ತು ಕಾನೂನು ಪಾಲಿಸಲಾಗುವುದು ಎಂದೂ ಮನವಿಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಅದಾಗ್ಯೂ, ಮಂಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ ಆಗಸ್ಟ್ 6ರಂದು ಹಿಂಬರಹ ನೀಡಿದ್ದಾರೆ. ಆದ್ದರಿಂದ, ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Related Articles
Thank you for your comment. It is awaiting moderation.


Comments (0)