ಜಾಮೀನಿಗಾಗಿ ಜಡ್ಜ್‌ಗೆ ಲಂಚ ನೀಡಬೇಕೆಂದು ಹಣ ಪಡೆದು ವಂಚನೆ; ವಕೀಲೆ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ
- by LegalSamachar
- August 6, 2026
- 8 Views
ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಬಂಧಿತನಾಗಿರುವ ವ್ಯಕ್ತಿಯೊಬ್ಬನಿಗೆ ಜಾಮೀನು ಕೊಡಿಸಲು ಹೈಕೋರ್ಟ್ ನ್ಯಾಯಮೂರ್ತಿಗೆ ಲಂಚ ನೀಡಬೇಕು ಎಂದು ಆರೋಪಿಯ ತಾಯಿಯಿಂದ ಹಣ ಪಡೆದ ಆರೋಪದಲ್ಲಿ ಮೈಸೂರಿನ ವಕೀಲೆಯೊಬ್ಬರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳ ನಿರ್ದೇಶನದಂತೆ ರಿಜಿಸ್ಟ್ರಾರ್ ಜನರಲ್ ಅವರು ನೀಡಿದ ದೂರಿನ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮೈಸೂರಿನ ವಕೀಲೆ ದಯೀನಾ ಬಾನು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಜಾಗೊಳಿಸಿದೆ.
ಬಂಧಿತನಾಗಿರುವ ಆರೋಪಿಯ ತಾಯಿ ಸಮನ್ವಯ ನ್ಯಾಯಪೀಠದ ಮುಂದೆ ಪತ್ರ ಒಂದನ್ನು ಹಿಡಿದು ಬಂದು ವಕೀಲೆ ಮತ್ತು ಆಕೆಯ ಸಹವರ್ತಿಗಳು ನ್ಯಾಯಮೂರ್ತಿಗಳಿಗೆ ಹಣ ನೀಡಿ ಜಾಮೀನು ಕೊಡಿಸುವುದಾಗಿ ಹೇಳಿದ್ದಾರೆ. ಈ ಆರೋಪದ ಮೇಲೆ ದೂರು ದಾಖಲಿಸಿದ್ದು, ತನಿಖೆ ನಡೆಸಿ, ಆರೋಪಿಗಳನ್ನು ಬಯಲಿಗೆ ಎಳೆಯಬೇಕಿದೆ. ಆರೋಪ ನಿಜವಾದರೆ ಅದು ನ್ಯಾಯಾಲಯದ ಪ್ರಾಮಾಣಿಕತೆಗೆ ಹಾನಿ ಉಂಟು ಮಾಡಲಿದೆ. ಆದ್ದರಿಂದ, ಇಲ್ಲಿ ಸಾಂಸ್ಥಿಕ ಪ್ರಾಮಾಣಿಕತೆಯ ವಿಚಾರ ಇರುವುದರಿಂದ ತನಿಖೆ ಅತ್ಯಗತ್ಯವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಸಾಮಾನ್ಯ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯು ಮಾಡಿದ ವಂಚನೆ ಅಪರಾಧವು ಕೆಲವು ಸಂದರ್ಭಗಳಲ್ಲಿ ಅವು ಸಾಂಸ್ಥಿಕ ಕಾಳಜಿಯ ವಿಚಾರವಾಗುತ್ತವೆ. ಆದ್ದರಿಂದ, ತನಿಖೆ ನಡೆದು ಸಕ್ಷಮ ನ್ಯಾಯಾಲಯದ ಮುಂದೆ ಅಂತಿಮ ವರದಿ ಸಲ್ಲಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತನಿಖೆಗೆ ಅಡ್ಡಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೇನು?
2021ರಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ವಿ. ವಿಷ್ಣು ದೇವನ್ ಎಂಬಾತ ಬಂಧಿತನಾಗಿದ್ದು, ಆತನ ತಾಯಿ ಥೆರೇಸಾ ಮಗನಿಗೆ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದರು. ಥೆರೇಸಾಗೆ ಮೆಯೊ ಹಾಲ್ ಕೋರ್ಟ್ ಬಳಿ ಮರೀನಾ ಫೆರ್ನಾಂಡೀಸ್ ಎಂಬಾಕೆಯ ಪರಿಚಯವಾಗಿತ್ತು. ಪುತ್ರನಿಗೆ ಜಾಮೀನು ಕೊಡಿಸಲು 10 ಲಕ್ಷ ರೂ. ಮರೀನಾ ಬೇಡಿಕೆ ಇಟ್ಟಿದ್ದಳು. ಹಣ ನೀಡಿದ ಹೊರತಾಗಿಯೂ ಜಾಮೀನು ಸಿಕ್ಕಿರಲಿಲ್ಲ. ಇದರಿಂದ, ಥೆರೇಸಾ ಹಣ ಮರಳಿಸುವಂತೆ ಮರೀನಾ ಬೆನ್ನುಬಿದ್ದಿದ್ದರಿಂದ ಆಕೆ ತಲಾ 3 ಲಕ್ಷ ರೂ. ಮೌಲ್ಯದ ಮೂರು ಚೆಕ್‌ಗಳನ್ನು ಥೆರೇಸಾಗೆ ನೀಡಿದ್ದಳು. ಅವುಗಳನ್ನು ಥೆರೇಸಾ ಬ್ಯಾಂಕ್‌ನಲ್ಲಿ ನಗದೀಕರಿಸಿರಲಿಲ್ಲ.
ಬಳಿಕ ಆರತಿ ಎಂಬಾಕೆಗೆ ಥೆರೇಸಾ ಪರಿಚಯವಾಗಿದ್ದು, ಆಕೆ ತಾನು ಹೈಕೋರ್ಟ್ ನ್ಯಾಯಮೂರ್ತಿಗೆ ಪರಿಚಿತಳಾಗಿರುವುದಾಗಿ ಹೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಆರತಿಗೆ 72 ಸಾವಿರ ರೂ. ಪಾವತಿಸಿದ್ದರು. ಆದರೆ, ಜಾಮೀನು ದೊರೆತಿರಲಿಲ್ಲ. ಈ ಕುರಿತು ಥೆರೇಸಾ ಕೇಳಿದ್ದು, ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ವಕೀಲರು ಪುತ್ರನ ಪರವಾಗಿ ನ್ಯಾಯಾಲಯ ಮುಂದೆ ಹಾಜರಾಗಿರಲಿಲ್ಲ ಎಂಬ ವಿಚಾರ ಥೆರೇಸಾಗೆ ತಿಳಿದು ಬಂದಿತ್ತು. ಆನಂತರ ಆರತಿ, 1 ಲಕ್ಷ ರೂ. ನೀಡಿದರೆ ಅದನ್ನು ನ್ಯಾಯಮೂರ್ತಿಗಳಿಗೆ ನೀಡಿ ಜಾಮೀನು ಕೊಡಿಸಲಾಗುವುದು ಎಂದು ಹೇಳಿದ್ದಾಗಿ ಥೆರೇಸಾ ಅವರ ದೂರಿನಲ್ಲಿ ವಿವರಿಸಲಾಗಿದೆ.
ಈ ಹಂತದಲ್ಲಿ ವಕೀಲೆ ದಯೀನಾ ಬಾನು ಪ್ರತ್ಯಕ್ಷವಾಗಿದ್ದು, ಪುತ್ರನಿಗೆ ಜಾಮೀನು ಪಡೆಯಲು ದೊಡ್ಡ ಮೊತ್ತವನ್ನು ಹೈಕೋರ್ಟ್ ನ್ಯಾಯಮೂರ್ತಿಗೆ ಪಾವತಿಸಬೇಕು ಎಂದು ಹೇಳಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಮರೀನಾ ಫರ್ನಾಂಡೀಸ್ ಮತ್ತು ಆರತಿ ಅವರು ವಂಚಿಸಿದ್ದಾರೆ ಎಂದು ಮೊದಲಿಗೆ ಥೆರೇಸಾ ಅವರು ವಕೀಲರ ಪರಿಷತ್‌ಗೆ ದೂರು ನೀಡಿದ್ದರು. ಆನಂತರ, 2024ರ ಡಿಸೆಂಬರ್ 18ರಂದು ನ್ಯಾಯಮೂರ್ತಿಗಳಿಗೆ ಲಂಚ ನೀಡಬೇಕು ಎಂದು ವಕೀಲೆ ಹಣ ಕೇಳುತ್ತಿದ್ದಾರೆ ಎಂದು ನೇರವಾಗಿ ಹೈಕೋರ್ಟ್‌ಗೆ ಪತ್ರ ಬರೆದಿದ್ದರು.
ಈ ಪತ್ರವನ್ನು ಆಧರಿಸಿ ಸಮನ್ವಯ ನ್ಯಾಯಪೀಠವು ರಿಜಿಸ್ಟ್ರಾರ್ ಜನರಲ್‌ಗೆ ಪ್ರಕರಣ ದಾಖಲಿಸಲು ನಿರ್ದೇಶಿಸಿತ್ತು. ಇದರ ಅನ್ವಯ ವಿಧಾನಸೌಧ ಠಾಣೆಯಲ್ಲಿ ದಯೀನಾ ಬಾನು ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ದಯೀನಾ ಬಾನು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆರೋಪಿಯ ವಾದವೇನು?
ದಯೀನಾ ಬಾನು ಪರ ವಕೀಲರು ವಾದ ಮಂಡಿಸಿ, ಅರ್ಜಿದಾರ ವಕೀಲೆಯು ಭಾರತೀಯ ವಕೀಲರ ಪರಿಷತ್‌ನಿಂದ ಶಿಸ್ತುಕ್ರಮ ಎದುರಿಸುತ್ತಿದ್ದಾರೆ. ಒಂದೊಮ್ಮೆ ಆರೋಪವನ್ನು ಒಪ್ಪಿಕೊಂಡರೂ ಅದರಲ್ಲಿ ವಂಚನೆಗೆ ಬೇಕಾದ ಅಂಶಗಳು ಕಾಣುವುದಿಲ್ಲ. ಪ್ರಾಥಮಿಕ ತನಿಖೆ ನಡೆಸದೇ ಎಫ್‌ಐಆರ್ ದಾಖಲಿಸಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ನ್ಯಾಯಮೂರ್ತಿಗಳಿಗೆ ಲಂಚ ನೀಡಲು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಗಂಭೀರ ಬೆದರಿಕೆಯೊಡ್ಡಿರುವುದರಿಂದ ಕೂಲಂಕಶ ತನಿಖೆ ಅಗತ್ಯವಾಗಿದೆ. ಪ್ರಕರಣಕ್ಕೆ ತಡೆ ನೀಡಿದ್ದರಿಂದ ತನಿಖೆ ಆರಂಭವೇ ಆಗಿಲ್ಲ ಎಂದಿದ್ದರು.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಪ್ರತಿನಿಧಿಸಿದ್ದ ವಕೀಲ ಮಧುಕರ್ ದೇಶಪಾಂಡೆ, ಹೈಕೋರ್ಟ್‌ನ ಸಮನ್ವಯ ನ್ಯಾಯಪೀಠ ನೀಡಿರುವ ನಿರ್ದೇಶನ ಪಾಲಿಸಿ, ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
Related Articles
Thank you for your comment. It is awaiting moderation.


Comments (0)