ಗಿಗ್ ಕಾರ್ಮಿಕರ ಕಾಯ್ದೆ ಪ್ರಶ್ನಿಸಿದ ಅರ್ಜಿ; ಆ.14ರವರೆಗೆ ಕಂಪನಿಗಳ ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್
- by Legal Samachar Desk
- July 3, 2026
- 10 Views
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ನಾಟಕ ಪ್ಲಾಟ್ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ-2025 ಹಾಗೂ ಅದರಡಿ ರೂಪಿಸಲಾಗಿರುವ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿರುವ ಹೈಕೋರ್ಟ್, ಅಲ್ಲಿಯವರೆಗೆ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯ ಸರಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿದೆ.
ಇಂಟರ್ನೆಂಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ, ದೇಶದ ಪ್ರಮುಖ ಇ-ಕಾಮರ್ಸ್ ಮತ್ತು ಗ್ರಾಹಕ ತಂತ್ರಜ್ಞಾನ ಸಂಸ್ಥೆಯಾದ ಸ್ವಿಗ್ಗಿ, ಜೊಮ್ಯಾಟೊ, ಝೆಪ್ಟೊ, ಅರ್ಬನ್ ಕಂಪನಿ ಹಾಗೂ ವ್ಯಾಲ್ಮೊ ಟ್ರಾನ್ಸ್ಪೋರ್ಟೇಷನ್ (ಮಿಶೋ) ಸಂಸ್ಥೆಗಳು ಜಂಟಿಯಾಗಿ ಸಲ್ಲಿಸಿರುವ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಬಿಸಿಲು, ಮಳೆ, ಚಳಿ ಎನ್ನದೇ ಗಿಗ್ ಕಾರ್ಮಿಕರು ಡೆಲಿವರಿ ಮಾಡುತ್ತಾರೆ. ಊಟ, ತಿಂಡಿ ಡೆಲಿವರಿಗೆ ಕಂಪನಿಗಳು ಶೇ.40ಕ್ಕೂ ಅಧಿಕ ಶುಲ್ಕ ಪಡೆಯುತ್ತಾರೆ. ಗಿಗ್ ಕಾರ್ಮಿಕರಿಗಾಗಿ 50 ಪೈಸೆ ನೀಡಲು ತಕರಾರೇಕೆ ಎಂದು ಪ್ರಶ್ನಿಸಿತಲ್ಲದೆ, ಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್ನ ಅಕೌಂಟ್ನಲ್ಲಿ ಗಿಗ್ ಶುಲ್ಕವನ್ನು 3 ವಾರಗಳಲ್ಲಿ ಠೇವಣಿಯಾಗಿರಿಸಬೇಕೆಂದು ಸೂಚಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ಒಳಗೊಂಡಂತೆ ಇಡೀ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ಸಂಹಿತೆ-2020 ಎಂಬ ಸಮಗ್ರ ಹಾಗೂ ಏಕರೂಪದ ಕಾನೂನು ಜಾರಿಗೊಳಿಸಿದೆ. ಕೇಂದ್ರದ ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುವಂತೆ ಜಾರಿಯಲ್ಲಿರುವಾಗ ಅದೇ ವಿಷಯದ ಮೇಲೆ ರಾಜ್ಯ ಸರ್ಕಾರ ಪ್ರತ್ಯೇಕ ಮತ್ತು ಸಮಾನಾಂತರ ಕಾನೂನು ರೂಪಿಸಿರುವುದು ನಿಯಮಬಾಹಿರ ಹಾಗೂ ಅಸಂವಿಧಾನಿಕವಾಗಿದೆ ಎಂದರು.
ಮುಂದುವರಿದು, ಕೇಂದ್ರದ ಕಾಯ್ದೆಯಡಿ ಕಂಪನಿಗಳು ಈಗಾಗಲೇ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಸಾಮಾಜಿಕ ಭದ್ರತಾ ನಿಧಿಗೆ ದೇಣಿಗೆ ನೀಡಬೇಕಾಗಿದೆ. ಆದರೆ, ರಾಜ್ಯ ಸರ್ಕಾರದ ಆದೇಶದಂತೆ ಅಗ್ರಿಗೇಟರ್ಗಳಿಗೆ ಪ್ರತಿ ಡೆಲಿವರಿ ಬೈಕ್ಗೆ 50 ಪೈಸೆ ಮತ್ತು ತ್ರಿಚಕ್ರ ವಾಹನಕ್ಕೆ 75 ಪೈಸೆ ಹಾಗೂ ನಾಲ್ಕು ಚಕ್ರ ವಾಹನಕ್ಕೆ 1 ರೂಪಾಯಿ ಶುಲ್ಕ ವಿಧಿಸಿದೆ. ಆದರೆ, ಈ ಹಣವನ್ನು ಬಳಸಲು ಯೋಜನೆಯನ್ನೂ ರೂಪಿಸಿಲ್ಲ. ರಾಜ್ಯ ಸರ್ಕಾರ ಪ್ರತಿ ವಹಿವಾಟಿನ ಆಧಾರದ ಮೇಲೆ ಪ್ರತ್ಯೇಕ ‘ಕಲ್ಯಾಣ ಶುಲ್ಕ’ ವಿಧಿಸುತ್ತಿರುವುದು ಉದ್ಯಮಗಳ ಮೇಲೆ ಭಾರಿ ಆರ್ಥಿಕ ಹೊರೆ ಬೀಳಲಿದೆ ಎಂದು ವಿವರಿಸಿದರು.
ಈ ವಾದಕ್ಕೆ ಆಕ್ಷೇಪಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಗಿಗ್ ಕಾರ್ಮಿಕರಿಗೆ ಹಣ ಬಳಕೆಗೆ ಮಂಡಳಿ ರಚಿಸಲಾಗಿದೆ. ಆ ಶುಲ್ಕವನ್ನು ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗೆ ಬಳಸಲಾಗುವುದು ಎಂದರು.
Related Articles
Thank you for your comment. It is awaiting moderation.


Comments (0)