ರೆಸಾರ್ಟ್ ಮಾಲೀಕರ ವಿರುದ್ಧ ಮಹಿಳೆ ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್
- by LegalSamachar
- July 3, 2026
- 6 Views
ಬೆಂಗಳೂರು: ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ವಾಗ್ವಾದ ನಡೆಸಿದ್ದ ಸರ್ವೀಸ್ ಹುಡುಗನ ವಿರುದ್ಧ ಕ್ರಮ ಕೈಗೊಳ್ಳದ ರೆಸಾರ್ಟ್ ಮಾಲೀಕರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ಮಹಿಳೆಯೊಬ್ಬರು ದಾಖಲಿಸಿರುವ ದೂರಿಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮಡಿಕೇರಿಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸ್ಕೈ ಲಾಕ್ ರೆಸಾರ್ಟ್ ಮಾಲೀಕರರಾದ ಎ.ಕೆ. ಮುತ್ತಪ್ಪ, ಪತ್ನಿ ಕೆ.ಸಿ. ರೀಟಾ, ಪುತ್ರಿ ಎ.ಎಂ. ಮೋನಿಷಾ ಹಾಗೂ ವ್ಯವಸ್ಥಾಪಕರಾದ ಎನ್.ಪಿ. ನಿಕ್ಕಿನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ರೆಸಾರ್ಟ್ನಲ್ಲಿ ಕೆಲಸಕ್ಕಿದ್ದ ಹುಡುಗನ ವಿರುದ್ದ ಕ್ರಮ ಜರುಗಿಸಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರನ್ನು ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಅದೂ ಯಾವ ಅಪರಾಧ ಎಂಬುದುನ್ನು ನೋಡಿದರೆ ಆಘಾತ ಮೂಡಿದೆ. ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಒಂದೊಮ್ಮೆ, ಈ ಪ್ರಕರಣ ಮುಂದುವರಿಸಲು ಅನುಮತಿ ನೀಡಿದರೆ, ಅದು ರೆಸಾರ್ಟ್ಗೆ ಬರುವ ಪ್ರತಿಯೊಬ್ಬ ಅತಿಥಿಯನ್ನೂ ಅವರು ಯಾವ ಜಾತಿಗೆ ಸೇರಿದವರು ಎಂದು ಕೇಳಿದಂತಾಗುತ್ತದೆ ಎಂದು ಆಘಾತ ವ್ಯಕ್ತಪಡಿಸಿದೆ.
ರೆಸಾರ್ಟ್ಗೆ ಅತಿಥಿಯಾಗಿ ಬಂದಿದ್ದ ದೂರುದಾರ ಮಹಿಳೆ ಯಾವ ಜಾತಿಗೆ ಸೇರಿದ್ದಾರೆ ಎನ್ನುವುದು ಅರ್ಜಿದಾರರಿಗೆ ತಿಳಿದಿಲ್ಲ. ಆದ್ದರಿಂದ, ದೂರುದಾರೆಗೆ ಅವರ ಜಾತಿಯ ಹೆಸರು ತೆಗೆದು ನಿಂದನೆ ಮಾಡಿರಲು ಅಥವಾ ತೊಂದರೆ ನೀಡಿರಲು ಸಾಧ್ಯವಿಲ್ಲ. ಮತ್ತೊಂದೆಡೆ, ಸರ್ವೀಸ್ ಬಾಯ್ ವಿರುದ್ಧ ದೂರು ದಾಖಲಾಗಿದ್ದು, ಆತನ ವಿರುದ್ಧ ತನಿಖೆ ನಡೆಯುತ್ತಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ದೂರಿಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ಅರ್ಜಿ ಇತ್ಯರ್ಥವಾಗುವವರೆಗೆ ತಡೆ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ರೆಸಾರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರಾಗಿದ್ದಾರೆ. ದೂರುದಾರೆಯು ರೆಸಾರ್ಟ್ಗೆ ಬಂದಿದ್ದ ಅತಿಥಿಯಾಗಿದ್ದರು. ಸರ್ವೀಸ್ ಬಾಯ್ ಹುಡುಗ ವಾಗ್ವಾದ ನಡೆಸಿದ ಬಗ್ಗೆ ತಿಳಿಸಿದರೂ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎನ್ನುವುದು ರೆಸಾರ್ಟ್ ಮಾಲೀಕರ ವಿರುದ್ಧ ದೂರುದಾರೆ ಆರೋಪಿಸಿದ್ದಾರೆ. ಪ್ರೀಮಿಯಂ ರೂಂ ನೀಡಲಾಗುವುದು, ಊಟದ ಬಿಲ್ ಮನ್ನಾ ಮಾಡುವುದಾಗಿಯ ದೂರುದಾರೆಗೆ ಅರ್ಜಿದಾರರು ಹೇಳಿದ್ದರು. ಆದರೆ, ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸರ್ವೀಸ್ ಬಾಯ್ ಹಾಗೂ ರೆಸಾರ್ಟ್ ಮಾಲೀಕರ ಮೇಲೆ ಮಹಿಳೆ ದೂರು ದಾಖಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ಅತಿಥಿಯಾಗಿ ಬಂದಿರುವ ಮಹಿಳೆಯ ಜಾತಿ ಯಾವುದು ಎಂದು ರೆಸಾರ್ಟ್ ಮಾಲೀಕರಿಗೆ ಹೇಗೆ ಗೊತ್ತಾಗಲು ಸಾಧ್ಯ? ಎಂದು ಪ್ರಶ್ನಿಸಿತಲ್ಲದೆ, ಇದನ್ನೇ ಕಾಯ್ದೆಯ ದುರುಪಯೋಗ ಎನ್ನುವುದು ಎಂದು ಪೊಲೀಸರ ಪರ ಹಾಜರಾಗಿದ್ದ ಸರ್ಕಾರಿ ಅಭಿಯೋಜನಕರನ್ನು ಉದ್ದೇಶಿಸಿ ಹೇಳಿ ತಡೆಯಾಜ್ಞೆ ನೀಡಿತು.
ಪ್ರಕರಣವೇನು?
ಬೆಂಗಳೂರಿನ ನಾಗರಭಾವಿ ಮುಖ್ತರಸ್ತೆಯ ಕಾವೇರಿ ಬಡಾವಣೆ ನಿವಾಸಿ ಮಹಿಳೆಯೊಬ್ಬರು 2026 ಜೂನ್ 24ರಂದು ನೀಡಿದ ದೂರು ಆಧರಿಸಿ ನಾಪೋಕ್ಲು ಠಾಣೆ ಪೋಲೀಸರು ಅರ್ಜಿದಾರರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ (ತಡೆ ಕಾಯ್ದೆ) ಅಡಿ ಎಫ್ಐಆರ್ ದಾಖಲಿಸಿದ್ದರು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
Thank you for your comment. It is awaiting moderation.


Comments (0)