ರಾಜ್ಯದ ವಿವಿಧೆಡೆಯ 52 ಪ್ರಕರಣಗಳನ್ನು ಹಿಂಪಡೆದಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
- by Jagan Ramesh
- July 2, 2026
- 10 Views
ಬೆಂಗಳೂರು: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಇನ್ನಿತರ ಕೆಲ ಕೋಮು ಗಲಭೆ ಪ್ರಕರಣಗಳೂ ಸೇರಿದಂತೆ ಹಲವು ರಾಜಕಾರಣಿಗಳು, ರೈತಪರ, ಕನ್ನಡಪರ ಹಾಗೂ ಸಾಮಾಜಿಕ ಹೋರಾಟಗಾರರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 52 ಪ್ರಕರಣಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತೆ 2026ರ ಮೇ 27ರಂದು ರಾಜ್ಯ ಗೃಹ ಇಲಾಖೆಯು ಸರ್ಕಾರಿ ಅಭಿಯೋಜಕರಿಗೆ ಆದೇಶಿಸಿದ್ದನ್ನು ಪ್ರಶ್ನಿಸಿ ವಕೀಲ ಗಿರೀಶ್ ಭಾರದ್ವಾಜ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಮೂವರು ಹಿರಿಯ ಸಚಿವರ ಶಿಫಾರಸಿನ ಮೇರೆಗೆ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಪ್ರಾಸಿಕ್ಯೂಷನ್ ಹಿಂಪಡೆದಿದೆ. ಈ ಸಂಬಂಧ 2025ರಲ್ಲಿ ಇದೇ ನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ವಿರುದ್ಧವಾದ ನಿಲುವನ್ನು ಸರ್ಕಾರ ತಳೆದಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರಾನಾಥ್ ಪೂಜಾರಿ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದನ್ನು ಆಲಿಸಿದ ನ್ಯಾಯಪೀಠ, ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿತು. ಜತೆಗೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಪ್ರಕರಣಗಳನ್ನು ಹಿಂಪಡೆದಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಆದೇಶಿಸಿತು.
ಈ ಮಧ್ಯೆ, ಪ್ರಕರಣದಲ್ಲಿ ಮೂರನೇ ಪ್ರತಿವಾದಿಯಾಗಿರುವ ಹಾಲಿ ಆರೋಗ್ಯ ಸಚಿವ ಯು.ಟಿ. ಖಾದರ್‌ಗೆ ನೋಟಿಸ್ ಜಾರಿಗೊಳಿಸಲು ನಿರಾಕರಿಸಿದ ನ್ಯಾಯಪೀಠ, ಸದನದಲ್ಲಿ ಸದಸ್ಯರು ನೀಡುವ ಹೇಳಿಕೆಗೆ ವಿನಾಯಿತಿ ಇರುತ್ತದೆ. ಇದನ್ನು ಆಧರಿಸಿ ಅವರನ್ನು ಪ್ರತಿವಾದಿ ಮಾಡಲಾಗದು ಎಂದು ಮೌಖಿಕವಾಗಿ ಹೇಳಿತು.
ಇದನ್ನು ಸಮರ್ಥಿಸಲು ವಕೀಲ ವೆಂಕಟೇಶ್ ದಳವಾಯಿ ಪ್ರಯತ್ನಿಸಿದರಾದರೂ ಅದನ್ನೊಪ್ಪದ ನ್ಯಾಯಪೀಠ, ಯು.ಟಿ. ಖಾದರ್‌ಗೆ ನೋಟಿಸ್ ಜಾರಿಗೊಳಿಸಲು ನಿರಾಕರಿಸಿ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿತು.
ಪ್ರಕರಣವೇನು?
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 52 ಪ್ರಕರಣಗಳನ್ನು ಹಿಂಪಡೆಯುವ ಕುರಿತ ಪ್ರಸ್ತಾವನೆಯನ್ನು 2026ರ ಮೇ 21ರಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿತ್ತು. ಮೇ 27ರಂದು ಗೃಹ ಇಲಾಖೆ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರಿ ಅಭಿಯೋಜಕರಿಗೆ ನಿರ್ದೇಶಿಸಿ ಆದೇಶ ಹೊರಡಿಸಿತ್ತು. ಇದರಿಂದ, ಗೃಹ ಇಲಾಖೆಯ ಆದೇಶ ಹಾಗೂ ಸಚಿವ ಸಂಪುಟದ ತೀರ್ಮಾನವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ. ಸರ್ಕಾರದ ತೀರ್ಮಾನವನ್ನು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ವಿರೋಧಿಸಿತ್ತು ಎಂಬ ವಿಚಾರ ಮಾಹಿತಿ ಹಕ್ಕು (ಆರ್‌ಟಿಐ) ದಾಖಲೆಗಳಿಂದ ತಿಳಿದುಬಂದಿದೆ. ಹೀಗಿದ್ದರೂ, ಸರ್ಕಾರ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
Related Articles
Thank you for your comment. It is awaiting moderation.


Comments (0)