ಲೌಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯ ವಿಡಿಯೊ ರವಾನಿಸಿದ ಆರೋಪ; ಮಹಿಳೆ ವಿರುದ್ಧದ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- July 2, 2026
- 9 Views
ಬೆಂಗಳೂರು: ಖಾಸಗಿ ಸಂಸ್ಥೆಯ ಮಾಲೀಕನೊಬ್ಬ ತನ್ನ ಬಳಿ ಉದ್ಯೋಗಕ್ಕಿದ್ದ ಮಹಿಳೆಯ ಮೇಲೆ ಎಸಗಿದ್ದನೆನ್ನಲಾದ ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೊಗಳನ್ನು ಸಂತ್ತಸ್ತೆಯ ಕುಟುಂಬದವರಿಗೆ ರವಾನಿಸಿದ ಆರೋಪ ಎದುರಿಸುತ್ತಿರುವ ಮಹಿಳೆಯ (ಮಾಲೀಕನ ಪತ್ನಿ) ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಯಲಹಂಕದ ಜಯಂತಿ ಜಿ. ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ವಜಾಗೊಳಿಸಿದೆ.
ಅಶ್ಲೀಲ ದೃಶ್ಯಗಳನ್ನು ಇತರರಿಗೆ ರವಾನಿಸುವ ಅಥವಾ ಪ್ರಸಾರ ಮಾಡುವ ಕೃತ್ಯವು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 67ಎ ಅಡಿಯಲ್ಲಿ ಅಪರಾಧವಾಗುತ್ತದೆ ಎಂದಿರುವ ನ್ಯಾಯಪೀಠ, ಪ್ರಕರಣದಲ್ಲಿ ಮೊದಲನೇ ಆರೋಪಿಯಿಂದ (ಅರ್ಜಿದಾರೆಯ ಪತಿ) ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆಯ ವಿಡಿಯೊ ಹಂಚಿರುವ ಆರೋಪ ಎದುರಿಸುತ್ತಿರುವ ಅರ್ಜಿದಾರೆ (ಎರಡನೇ ಆರೋಪಿ) ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 67ಎ ಅಡಿಯಲ್ಲಿ ವಿಚಾರಣೆಯನ್ನು ಎದುರಿಸಲೇಬೇಕು ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದನ್ನು ತಡೆಗಟ್ಟುವುದು ಐಟಿ ಕಾಯ್ದೆಯ ಸೆಕ್ಷನ್ 67ರ ಉದ್ದೇಶವಾಗಿದೆ. ‘ಸ್ಪಷ್ಟ ಲೈಂಗಿಕ ಅಂಶಗಳನ್ನು ಹೊಂದಿದ’ (Sexually Explicit) ಎಂಬ ಪದವನ್ನು ಕೇವಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯಗಳನ್ನು ರವಾನಿಸುವ ಅಥವಾ ಪ್ರಸಾರ ಮಾಡುವ ಮೂಲಕ ಮಹಿಳೆಯರು, ಮಕ್ಕಳು ಅಥವಾ ಯಾವುದೇ ವ್ಯಕ್ತಿಯ ಶೋಷಣೆಯನ್ನು ತಡೆಯುವುದು ಕಾಯ್ದೆಯ ಆಶಯವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪೂರ್ಣ ಪ್ರಮಾಣದ ವಿಚಾರಣೆ ಅಗತ್ಯ:
ಅರ್ಜಿದಾರ ಮಹಿಳೆಯ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಲ್ಲಿ ಯಾವುದೇ ಅಶ್ಲೀಲ ವಿಡಿಯೊ ಅಥವಾ ಫೋಟೋಗಳನ್ನು ರವಾನಿಸಿದ ಪುರಾವೆಗಳು ಪತ್ತೆಯಾಗಿಲ್ಲ ಎಂದು ಆಕೆಯ ಪರ ವಕೀಲರು ವಾದಿಸಿದ್ದಾರೆ. ಆದರೆ, ಅರ್ಜಿದಾರೆ ವಿರುದ್ಧದ ಆರೋಪಗಳ ಸತ್ಯಾಸತ್ಯತೆಯು ನ್ಯಾಯಾಂಗ ವಿಚಾರಣೆಯ ಮೂಲಕವಷ್ಟೇ ನಿರ್ಧರಿಸಲು ಸಾಧ್ಯ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ದೂರು, ದೋಷಾರೋಪ ಪಟ್ಟಿಯ ಸಾರಾಂಶ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾದ ಸಂತ್ತಸ್ತೆಯ ಹೇಳಿಕೆಗಳನ್ನು ಕೂಲಂಕಷವಾಗಿ ಗಮನಿಸಿದರೆ, ದೂರುದಾರರನ್ನು ಲೈಂಗಿಕ ಶೋಷಣೆ, ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಒಳಪಡಿಸಲಾಗಿದ್ದು, ಅಂತಿಮವಾಗಿ ಆಕೆಯ ಸಂಬಂಧಿಕರು ಹಾಗೂ ಕುಟುಂಬ ಸದಸ್ಯರಿಗೆ ಅಶ್ಲೀಲ ವಿಡಿಯೊ ರವಾನಿಸಲಾಗಿದೆ. ಈ ದೃಶ್ಯಗಳನ್ನು ರವಾನಿಸಿರುವುದರಲ್ಲಿ ಅರ್ಜಿದಾರೆಯ ಸಕ್ರಿಯ ಪಾತ್ರವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದರ ಸತ್ಯಾಸತ್ಯತೆಯು ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಹಾಗೂ ನ್ಯಾಯಾಂಗ ಪರಿಶೀಲನೆ ಒಳಗೊಂಡ ಪೂರ್ಣ ಪ್ರಮಾಣದ ವಿಚಾರಣೆಯ ಮೂಲಕವೇ ಹೊರಬರಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಮಿನಿ ಟ್ರಯಲ್ ನಡೆಸಲಾಗದು:
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿಯಲ್ಲಿ ಅಧಿಕಾರ ಚಲಾಯಿಸುವಾಗ ನ್ಯಾಯಾಲಯಗಳು ‘ಮಿನಿ ಟ್ರಯಲ್’ (ಕಿರು ವಿಚಾರಣೆ) ನಡೆಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, ಈ ಪ್ರಕರಣವು ಗಂಭೀರವಾದ ಮತ್ತು ವಿವಾದಾತ್ಮಕವಾದ ಸತ್ಯಾಂಶಗಳಿಂದ ಕೂಡಿದ್ದು, ಇವುಗಳನ್ನು ಇಂತಹ ಆರಂಭಿಕ ಹಂತದ ಅರ್ಜಿಗಳ ಮೂಲಕ ಇತ್ಯರ್ಥಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅರ್ಜಿದಾರೆ ಮೇಲಿನ ಆರೋಪವೇನು?
ಪ್ರಕರಣದ ದಾಖಲೆಗಳ ಪ್ರಕಾರ, ದೂರುದಾರೆ ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕ ಮಲ್ಲಿಕಾರ್ಜುನ್ ಎಂ. ಎಂಬಾತ ಬಲವಂತ ಹಾಗೂ ದೌರ್ಜನ್ಯದ ಮೂಲಕ ಸಂತ್ರಸ್ತೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗ ನಡೆಸಿದ್ದಲ್ಲದೆ, ಆ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತ ಮತ್ತೆ ಮತ್ತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆತನ ಕಿರುಕುಳ ತಾಳಲಾರದೆ ಸಂತ್ರಸ್ತೆ ಕೆಲಸಕ್ಕೆ ರಾಜೀನಾಮೆ ನೀಡಿ ಬೇರೊಂದು ಸಂಸ್ಥೆಗೆ ಸೇರಿದ್ದರು. ಬೇರೆಡೆ ಕೆಲಸಕ್ಕೆ ಸೇರಿದ್ದನ್ನು ಹಾಗೂ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಸಹಿಸಲಾರದೆ ಸಂತ್ರಸ್ತೆ ಹಾಗೂ ಪತಿಯ ನಡುವಿನ ಅಶ್ಲೀಲ ವಿಡಿಯೊಗಳನ್ನು ಸಂತ್ರಸ್ತೆಯ ಪತಿ ಹಾಗೂ ಸಂಬಂಧಿಕರಿಗೆ ಹಂಚಿದ ಪ್ರಮುಖ ಆರೋಪ ಅರ್ಜಿದಾರೆಯ ಮೇಲಿದೆ.
ಈ ಸಂಬಂಧ 2025ರ ಆಗಸ್ಟ್ 30ರಂದು ಸಂತ್ರಸ್ತೆ ನೀಡಿದ್ದ ದೂರಿನ ಆಧಾರದಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಅರ್ಜಿದಾರೆ ಮತ್ತವರ ಪತಿ ಮಲ್ಲಿಕಾರ್ಜುನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 64(1) (ಅತ್ಯಾಚಾರ), 68 (ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ಸಂಭೋಗ), 351(2) (ಕ್ರಿಮಿನಲ್ ಬೆದರಿಕೆ) ಹಾಗೂ ಐಟಿ ಕಾಯ್ದೆಯ ಸೆಕ್ಷನ್ 67 (ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯ ಪ್ರಕಟಿಸುವುದು ಅಥವಾ ರವಾನಿಸುವುದು) ಹಾಗೂ 67ಎ (ಸ್ಪಷ್ಟ ಲೈಂಗಿಕ ಕೃತ್ಯ ಹೊಂದಿರುವ ವಿಷಯ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Related Articles
Thank you for your comment. It is awaiting moderation.


Comments (0)