ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆ ಪ್ರಶ್ನಿಸಿದ ಅರ್ಜಿ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
- by Prashanth Basavapatna
- June 30, 2026
- 8 Views
ಬೆಂಗಳೂರು: ರಾಜ್ಯದ 80ಕ್ಕೂ ಅಧಿಕ ಉದ್ದಿಮೆಗಳಲ್ಲಿ ದುಡಿಯುತ್ತಿರುವ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ವೇತನ ಪರಿಷ್ಕರಣೆ ಮಾಡಿ 2026ರ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಕರ್ನಾಟಕದಲ್ಲಿ ಅಂದಾಜು 2 ಸಾವಿರ ಮಾರಾಟಗಾರರನ್ನು ಹೊಂದಿರುವ ದೆಹಲಿ ಮೂಲದ ದಿ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್ಎಡಿಎ) ಹಾಗೂ ಬೆಂಗಳೂರಿನಲ್ಲಿರುವ ಅದರ ನಾಲ್ಕು ಸದಸ್ಯ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಕಾರ್ಮಿಕ ಸಚಿವಾಲಯ, ರಾಜ್ಯ ಕಾರ್ಮಿಕ ಇಲಾಖೆ, ಕಾರ್ಮಿಕ ಸಂಘಟನೆಗಳಾದ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಕರ್ನಾಟಕ ಜನರಲ್ ಲೇಬರ್ ಯೂನಿಯನ್, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ಗೆ (ಸಿಐಟಿಯು) ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿತು.
ಅರ್ಜಿಯಲ್ಲೇನಿದೆ?
ಎಫ್ಎಡಿಎ ರಾಜ್ಯದಲ್ಲಿ 1,998 ಮಾರಾಟಗಾರರನ್ನು ಹೊಂದಿದ್ದು, ಅಂದಾಜು 2 ಲಕ್ಷ ಜನರಿಗೆ ನೇರ ಉದ್ಯೋಗ ದೊರಕಿಸಿದೆ. ಈ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗೆ ಎಫ್ಎಡಿಎ ಮತ್ತದರ ಸದಸ್ಯ ಕಂಪನಿಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸರ್ಕಾರದ ವೇತನ ಪರಿಷ್ಕರಣೆ ಇದಕ್ಕೆ ಹಿನ್ನಡೆ ಉಂಟು ಮಾಡುವ ಆತಂಕವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರ ‘ಕಾರ್ಮಿಕ ಸಂಹಿತೆ-2019’ ಜಾರಿಗೆ ತಂದು ಕನಿಷ್ಟ ವೇತನ ಕಾಯ್ದೆ-1948ನ್ನು 2025ರಲ್ಲಿ ನಿರಸನಗೊಳಿಸಿದೆ. ದಕ್ಷಿಣದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಈಗಾಗಲೇ ಕನಿಷ್ಠ ವೇತನ ಹೆಚ್ಚಾಗಿಯೇ ಇದೆ. ಹೀಗಿರುವಾಗ, ರಾಜ್ಯ ಸರ್ಕಾರದ ವೇತನ ಪರಿಷ್ಕರಣೆ ಜಾರಿಗೆ ಬಂದರೆ ಆಟೋಮೊಬೈಲ್ ವಲಯದ ಉದ್ದಿಮೆ ಹಾಗೂ ಮಾರಾಟಗಾರರಿಗೆ ದೊಡ್ಡ ಹೊಡೆತ ಬಿದ್ದು, ಭಾರಿ ಆರ್ಥಿಕ ನಷ್ಟ ಉಂಟಾಗಲಿದೆ. ಆದ್ದರಿಂದ, ಕನಿಷ್ಠ ವೇತನ ಪರಿಷ್ಜರಣೆ ಮಾಡಿ 2026ರ ಮೇ 22ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಕಾನೂನು ನ್ಯೂನ್ಯತೆಗಳನ್ನು ಹೊಂದಿದ್ದು, ಅದನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
Related Articles
Thank you for your comment. It is awaiting moderation.


Comments (0)