ಸೌರ ಯೋಜನೆಗಳಲ್ಲಿ ಸ್ಥಳೀಯ ಸೋಲಾರ್ ಸೆಲ್ ಬಳಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ; ಕೇಂದ್ರದ ವಿವರಣೆ ಕೇಳಿದ ಹೈಕೋರ್ಟ್
- by Jagan Ramesh
- June 22, 2026
- 8 Views
ಬೆಂಗಳೂರು: ದೇಶೀಯ, ವಾಣಿಜ್ಯ ಮತ್ತು ಕೈಗಾರಿಕಾ ಸೌರ ಯೋಜನೆಗಳಲ್ಲಿ ಸ್ಥಳೀಯ ಉತ್ಪಾದನೆಯ ಸೌರ ಕೋಶಗಳನ್ನು (ಸೋಲಾರ್ ಸೆಲ್ಸ್) ಮಾತ್ರ ಬಳಸುವ ಆದೇಶಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಸೌರ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ 2026ರ ಜೂನ್ 1ರಿಂದ ಅನ್ವಯವಾಗುವಂತೆ ದೇಶೀಯ, ವಾಣಿಜ್ಯ ಮತ್ತು ಕೈಗಾರಿಕಾ ಸೌರ ಯೋಜನೆಗಳಲ್ಲಿ ಸ್ಥಳೀಯವಾಗಿ ತಯಾರಿಸಿದ ಸೌರ ಕೋಶಗಳನ್ನು ಮಾತ್ರ ಬಳಸಬೇಕು ಎಂದು ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ ಸುತ್ತೋಲೆ ಹೊರಡಿಸಿತ್ತು.
ಕೇಂದ್ರದ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ನವೀಕರಿಸಬಹುದಾದ ಇಂಧನ ಉತ್ಪಾದಕರ ಸಂಘ, ಕೇರಳ ನವೀಕರಿಸಬಹುದಾದ ಇಂಧನ ಉದ್ಯಮಿಗಳು ಮತ್ತು ಪ್ರವರ್ತಕರ ಸಂಘ, ತಮಿಳುನಾಡು ಸೌರಶಕ್ತಿ ಅಭಿವೃದ್ದಿದಾರರ ಸಂಘ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೇಂದ್ರ ಸರ್ಕಾರದ ನಿಯಮದಿಂದ ಸೌರ ವಿದ್ಯುತ್ ಉತ್ಪಾದಕರಿಗೆ ಸಂಕಷ್ಟ ಎದುರಾಗಿದೆ. ಸದ್ಯದ ಸೌರ ವಿದ್ಯುತ್ ಯೋಜನೆಗಳ ಬೇಡಿಕೆಗೆ ತಕ್ಕಂತೆ ಸೋಲಾರ್ ಸೆಲ್‌ಗಳನ್ನು ಸರಬರಾಜು ಮಾಡುವ ಸಾಮರ್ಥ್ಯವನ್ನು ದೇಶಿಯ ಸೌರ ಕೋಶಗಳ ಸರಬರಾಜುದಾರರು ಹೊಂದಿಲ್ಲ. ಅಲ್ಲದೇ ಗುಣಮಟ್ಟವೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೋಲಿಸಿದರೆ ದರ ಸಹ ದುಪ್ಪಟ್ಟು ಆಗಿದೆ. ಆದ್ದರಿಂದ, ಕೇಂದ್ರ ಸರ್ಕಾರದ ಆದೇಶದ ಕಾರ್ಯಾಚರಣೆಗೆ ತಡೆ ನೀಡಬೇಕು ಎಂದು ಕೋರಿದರು.
ಇದನ್ನು ಆಲಿಸಿದ ನ್ಯಾಯಪೀಠ, ಪ್ರತಿವಾದಿಯಾಗಿರುವ ನವೀಕರಿಸಬಹುದಾದ ಇಂಧನ ಸಚಿವಾಲಯದ ವಾದ ಆಲಿಸದೆ, ಈ ಹಂತದಲ್ಲಿ ಯಾವುದೇ ಆದೇಶ ಮಾಡುವುದಿಲ್ಲ ಎಂದು ತಿಳಿಸಿತಲ್ಲದೆ, ಅರ್ಜಿಯಲ್ಲಿ ಆಕ್ಷೇಪಿಸಲಾಗಿರುವ ವಿಷಯದ ಬಗ್ಗೆ ವಿವರಣೆ ನೀಡುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)