ಮಹಿಳೆಯ ನಗ್ನ ಚಿತ್ರ ತೆಗೆದ ಆರೋಪ; ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ಸಂಬಂಧ ಎಸ್ಐಟಿಗೆ ಹೈಕೋರ್ಟ್ ನೋಟಿಸ್
- by Jagan Ramesh
- June 19, 2026
- 7 Views
ಬೆಂಗಳೂರು: ಹಾಸನದ ಕೇಂದ್ರೀಯ ವಿದ್ಯಾಲಯದಲ್ಲಿ ಪುತ್ರನಿಗೆ ಸೀಟು ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಚಿತ್ರೀಕರಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ಸಂಬಂಧ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದಲ್ಲಿ ಡಿಫಾಲ್ಟ್ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನ್ಯಾಯಪೀಠ, ಏನಿದು ಮತ್ತೆ ಜಾಮೀನು? ಎಂದು ಪ್ರಶ್ನಿಸಿತು. ಪ್ರಜ್ವಲ್ ಪರ ವಕೀಲ ಜಿ. ಅರುಣ್ ಅವರು, ಡಿಫಾಲ್ಟ್ ಜಾಮೀನು ಕೋರಿದ್ದೇವೆ. ಈಗ ಈ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ ಎಂದರು.
ಅದಕ್ಕೆ ನ್ಯಾಯಪೀಠ, ಯಾವುದರಲ್ಲಿ ಡಿಫಾಲ್ಟ್ ಬೇಲ್? ಐಪಿಸಿ ಸೆಕ್ಷನ್ 354ಎ, ಬಿ, ಸಿ, ಡಿ ಪ್ರಕರಣವೇ? ಎಂದು ಕೇಳಿತು. ನ್ಯಾಯಾಲಯದಲ್ಲಿ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಎಸ್ಐಟಿ ಪರವಾಗಿ ನೋಟಿಸ್ ಸ್ವೀಕರಿಸುವುದಾಗಿ ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಜುಲೈ 3ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಸಂತ್ರಸ್ತೆಯ ದೂರಿನ ಪ್ರಕಾರ, 2019ರಲ್ಲಿ ಸಂಸದರ ಕೋಟಾದಲ್ಲಿ ಆಕೆಯ ಪುತ್ರನಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವಂತೆ ಪ್ರಜ್ವಲ್ ಅವರನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ಮೊಬೈಲ್ ನಂಬರ್ ಸಂಗ್ರಹಿಸಿದ್ದ ಪ್ರಜ್ವಲ್ 2019ರಿಂದ 2021ರ ನಡುವೆ ಪದೇಪದೆ ಆಕೆಗೆ ಕರೆ ಮಾಡಿ, ವಿವಸ್ತ್ರವಾಗಿ ಮೊಬೈಲ್ ಕ್ಯಾಮರಾ ಮುಂದೆ ಬರುವಂತೆ ಪೀಡಿಸಿದ್ದರು. ಆಕೆ ವಿವಸ್ತ್ರವಾಗಿ ಕ್ಯಾಮರಾ ಮುಂದೆ ಬಂದಾಗ ಆಕೆಯ ಅನುಮತಿ ಇಲ್ಲದೇ ವಿಡಿಯೊ ರೆಕಾರ್ಡ್ ಮಾಡಿ, ಫೋಟೊಗಳನ್ನು ಸಂಗ್ರಹಿಸಿದ್ದರು. ಕರೆ ಮಾಡಿದಾಗ ಫೋನ್ ತೆಗೆಯದಿದ್ದರೆ ಫೋಟೊಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.
ಈ ಆರೋಪದಲ್ಲಿ ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ಗಳಾದ 354ಎ (ಲೈಂಗಿಕ ಕಿರುಕುಳ), 354ಬಿ (ವಿವಸ್ತ್ರಗೊಳಿಸಲು ಬೆದರಿಕೆ), 354ಡಿ (ಹಿಂಬಾಲಿಸುವುದು) ಹಾಗೂ 506 (ಕ್ರಿಮಿನಲ್ ಬೆದರಿಕೆ) ಜತೆಗೆ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ಗಳಾದ 66ಇ ಮತ್ತು 67 ಅಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಜ್ವಲ್ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ 3 ಹಾಗೂ ಮಹಿಳೆಯನ್ನು ವಿವಸ್ತ್ರಗೊಳಿಸಿದ 1 ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳು ದಾಖಲಾಗಿದ್ದು, ಒಂದು ಅತ್ಯಾಚಾರ ಪ್ರಕರಣದ ವಿಚಾರಣೆ ಪೂರ್ಣಗೊಂಡು ಆಜೀವ ಸೆರೆವಾಸದ ಶಿಕ್ಷೆಯಾಗಿದೆ.
Related Articles
Thank you for your comment. It is awaiting moderation.


Comments (0)