ಡಿ.ಕೆ. ಶಿವಕುಮಾರ್ ನೇತೃತ್ವದ ಮಂತ್ರಿ ಮಂಡಲ ರಚನೆ ಪ್ರಶ್ನಿಸಿದ್ದ ಪಿಐಎಲ್‌ ವಜಾ; ಅರ್ಜಿದಾರರಿಗೆ 50 ಸಾವಿರ ರೂ. ದಂಡ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ 14 ಮಂದಿ ಸಚಿವರ ಪ್ರಮಾಣ ವಚನ ಸ್ವೀಕಾರ ಹಾಗೂ ಮಂತ್ರಿಮಂಡಲದ ರಚನೆ ಸಂವಿಧಾನಬಾಹಿರವೆಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 13 ಮಂದಿ ನೂತನ ಸಚಿವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಹುಬ್ಬಳ್ಳಿಯ ನಿವಾಸಿ ಮಂಗಳಪ್ಪ ತಿಪ್ಪಣ್ಣ ಹುಲಿಕೇರಿ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಇದೊಂದು ಊಹೆ ಮತ್ತು ಗ್ರಹಿಕೆಗಳ ಆಧಾರದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಸಲ್ಲಿಸಲಾಗಿರುವ ಕ್ಷುಲ್ಲಕ ಅರ್ಜಿಯಾಗಿದೆ. ಇಂಥ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಅಮೂಕ್ಯ ಸಮಯ ಪೋಲು ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿತು.

ಜತೆಗೆ, ದಂಡದ ಮೊತ್ತವನ್ನು 2 ವಾರಗಳನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ನಿರ್ದೇಶನ ನೀಡಿತು. ಈ ಮಧ್ಯೆ, ಅರ್ಜಿ ಹಿಂಪಡೆದುಕೊಳ್ಳಲಾಗುವುದು ಎಂದು ವಕೀಲರು ಪದೇಪದೆ ಮನವಿ ಮಾಡಿದರಾದರೂ, ಅದನ್ನು ನ್ಯಾಯಪೀಠ ತಳ್ಳಿ ಹಾಕಿತು.

ಅರ್ಜಿದಾರರ ಆಕ್ಷೇಪವೇನು?
ಮುಖ್ಯಮಂತ್ರಿ ಸೇರಿ 13 ಮಂದಿ ಸಚಿವರು ಜೂನ್ 3ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಆ ಮೂಲಕ 14 ಮಂದಿ ಸಚಿವರ ಮಂತ್ರಿ ಮಂಡಲ ರಚನೆಯಾಗಿದೆ. ಆದರೆ, ಕರ್ನಾಟಕದ ವಿಧಾನಸಭೆಯ ಸಂಖ್ಯಾಬಲ 224 ಆಗಿದ್ದು, ಸಂವಿಧಾನದ ಪರಿಚ್ಚೇದ 161 (1ಎ) ಪ್ರಕಾರ ಕರ್ನಾಟಕದ ಸಚಿವ ಸಂಪುಟದ ಗಾತ್ರ ಶೇ. 12 ರಿಂದ 15 ಅಂದರೆ ಕನಿಷ್ಠ 24 ಅಥವಾ ಗರಿಷ್ಠ 34 ಇರಬೇಕು. ಅಷ್ಟೇ ಸಂಖ್ಯೆ ಸಚಿವರ ಪ್ರಮಾಣ ವಚನ ಸ್ವೀಕರಿಸಿ, ಮಂತ್ರಿ ಮಂಡಲ ರಚನೆಯಾಗಬೇಕು. ಆದರೆ, ಜೂನ್ 3ರಂದು 14 ಮಂದಿಯ ಮಂತ್ರಿಮಂಡಲ ರಚನೆಯಾಗಿದ್ದು, ಇದು ಸಂವಿಧಾನಬಾಹಿರ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಜತೆಗೆ, ಮಂತ್ರಿಮಂಡಲವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥ ಆಗುವವರೆಗೆ ಮಂತ್ರಿಮಂಡಲ ಕಾರ್ಯನಿರ್ವಹಿಸದಂತೆ ಹಾಗೂ ಯಾವುದೇ ನಿರ್ಣಯಗಳನ್ನು ಕೈಗೊಳ್ಳದಂತೆ ನಿರ್ದೆಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

Related Articles

Comments (0)

Leave a Comment