ಆರ್ಟಿಐ ಕಾಯ್ದೆ; ಬಿಡಿಎ ಕಾರ್ಯದರ್ಶಿ ಶಿವಕುಮಾರ್ ವಿರುದ್ಧದ ಶಿಸ್ತುಕ್ರಮ ಶಿಫಾರಸು ರದ್ದತಿಗೆ ಹೈಕೋರ್ಟ್ ನಕಾರ
- by LegalSamachar
- June 15, 2026
- 6 Views
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯದರ್ಶಿ ಶಿವಕುಮಾರ್ ಸಿ.ಎಲ್. ವಿರುದ್ಧ ಕರ್ನಾಟಕ ಮಾಹಿತಿ ಆಯೋಗ (ಕೆಐಸಿ) ಶಿಫಾರಸು ಮಾಡಿದ ಶಿಸ್ತು ಕ್ರಮ ಆದೇಶ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ನ್ಯಾಯಾಲಯಕ್ಕೆ “ವಂಚಿಸುವ” ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡಲಾಗದು ಎಂದು ತೀಕ್ಷ್ಣವಾಗಿ ನುಡಿದಿದೆ.
ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆ ಅಡಿಯಲ್ಲಿ ಹೊರಡಿಸಲಾದ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ 25 ಸಾವಿರ ರೂ. ದಂಡ ವಿಧಿಸಿ, ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿರುವ ಕೆಐಸಿಯ ಆದೇಶಗಳನ್ನು ಪ್ರಶ್ನಿಸಿ ಬಿಡಿಎ ಕಾರ್ಯದರ್ಶಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾಗೊಳಿಸಿದೆ.
ಕರ್ನಾಟಕ ಮಾಹಿತಿ ಆಯುಕ್ತರು ರಾಜ್ಯದಲ್ಲಿ ಆರ್ಟಿಐ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಉಸ್ತುವಾರಿ ಹೊಂದಿರುವ ಅರೆ-ನ್ಯಾಯಾಂಗ ಪ್ರಾಧಿಕಾರವಾಗಿದ್ದಾರೆ. ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೊದಲ ಮೇಲ್ಮನವಿ ಪ್ರಾಧಿಕಾರಗಳು ಕೆಐಸಿ ಹೊರಡಿಸಿದ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಕೆಐಸಿಯ ನಿರ್ದೇಶನಗಳನ್ನು ಪಾಲಿಸದಿರುವುದು ಮಾತ್ರವಲ್ಲದೆ, ಪದೇಪದೆ ನಿರ್ದೇಶಿಸಿದರೂ ಅರ್ಜಿದಾರರ ಪರವಾಗಿ ಆಯೋಗದ ಮುಂದೆ ಯಾರೂ ಹಾಜರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ಕೆಐಸಿ ಪ್ರಕರಣ ಕೈಗೆತ್ತಿಕೊಂಡ ದಿನಾಂಕಗಳಂದು, ಅರ್ಜಿದಾರರ ಕಡೆಯಿಂದ ಯಾವುದೇ ಸ್ಪಂದನೆಯಾಗದಿರುವುದನ್ನು ಕಾನೂನು ಅಥವಾ ವಾಸ್ತವದಲ್ಲಿ ಸಮರ್ಥಿಸಲಾಗದು. ವಾಸ್ತವವಾಗಿ, ಅಂತಹ ನಡವಳಿಕೆಯನ್ನು ಒಪ್ಪಲಾಗದು, ಈ ನ್ಯಾಯಾಲಯವೂ ಅದನ್ನು ಒಪ್ಪುವುದಿಲ್ಲ ಎಂದು ಹೇಳಿದೆ.
ಪ್ರತಿವಾದಿ ಸುರೇಶ್ ಚಂದ್ರ ಬಾಬು ಅವರು ಕೆಲವು ಮಾಹಿತಿ ಕೋರಿ ಸಲ್ಲಿಸಿದ ಆರ್ಟಿಐ ಅರ್ಜಿಗೆ ನಿಗದಿತ ಅವಧಿಯೊಳಗೆ ಮಾಹಿತಿಯನ್ನು ಒದಗಿಸದ ಕಾರಣ, ಬಾಬು ಅವರು 2023ರ ಮಾರ್ಚ್ 9ರಂದು ಮೊದಲ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರಿಗೂ ಮೊದಲು ಇದ್ದ ಕಾರ್ಯದರ್ಶಿ ಮೇ 5ರಂದು ಕೆಲ ಕ್ರಮಗಳನ್ನು ಪ್ರಾರಂಭಿಸಿದ್ದರೂ, ಮೇಲ್ಮನವಿಯ ಕುರಿತು ಯಾವುದೇ ಅಂತಿಮ ಆದೇಶ ಮಾಡಿರಲಿಲ್ಲ. ಅರ್ಜಿದಾರರನ್ನು 2025ರ ಮೇ 7ರಂದು ಬಿಡಿಎ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಮೇ 8ರಂದು ಅಧಿಕಾರ ವಹಿಸಿಕೊಂಡಿದ್ದರು. ಇದರ ಭಾಗವಾಗಿ ಅವರು ಆರ್ಟಿಐ ಕಾಯ್ದೆ ಅಡಿ ಮೊದಲ ಮೇಲ್ಮನವಿ ಪ್ರಾಧಿಕಾರವಾಗಿದ್ದರು. ಅದಾಗ್ಯೂ, ಅವರು ಅಧಿಕಾರ ವಹಿಸಿಕೊಂಡ ನಂತರವೂ, ಬಾಕಿ ಇರುವ ಮೇಲ್ಮನವಿಯ ಮೇಲೆ ಯಾವುದೇ ಆದೇಶಗಳನ್ನು ಹೊರಡಿಸಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಮೊದಲ ಮೇಲ್ಮನವಿ ಪ್ರಾಧಿಕಾರದ ಮುಂದೆ 2023ರ ಮಾರ್ಚ್ 9ರಿಂದ ಬಾಕಿ ಇರುವ ಮೇಲ್ಮನವಿಯ ಸಂಬಂಧ 2025ರ ಮೇ 8ರ ನಂತರವೂ ಯಾವುದೇ ಕ್ರಮ ಕೈಗೊಂಡಿರದ ಕಾರಣ 2026ರ ಜನವರಿ 1ರಂದು ಕೆಐಸಿ ಆದೇಶ ಮಾಡಿದೆ ಎಂದು ಹೈಕೋರ್ಟ್ ಹೇಳಿದೆ.
ಕೆಐಸಿ ಮುಂದೆ ಜುಲೈ 8, ಆಗಸ್ಟ್ 12 ಮತ್ತು ನವೆಂಬರ್ 5, 2025 ರಂದು ವಿಚಾರಣೆ ನಡೆದಿದ್ದು, ಈ ಸಮಯದಲ್ಲಿ ಅರ್ಜಿದಾರರ ಪರವಾಗಿ ಯಾವುದೇ ಪ್ರಾತಿನಿಧ್ಯವಿರಲಿಲ್ಲ. ಅಲ್ಲದೇ ಪ್ರತಿವಾದಿ ಸುರೇಶ್ ಚಂದ್ರ ಬಾಬು ಕೋರಿದ್ದ ಮಾಹಿತಿಯನ್ನು ಒದಗಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರ ಪರಿಣಾಮ ಜನವರಿ 1, 2026 ರಂದು, ಕೆಐಸಿಯು ₹25,000 ದಂಡ ವಿಧಿಸಿ, ಮಾಹಿತಿ ಒದಗಿಸುವಂತೆ ನಿರ್ದೇಶಿಸಿತು. ಫೆಬ್ರವರಿ 10, 2026ರಂದು ಪ್ರಕರಣ ಮತ್ತೆ ವಿಚಾರಣೆಗೆ ಬಂದಾಗ ಆಯೋಗದ ಮುಂದೆ ಶಿವಕುಮಾರ್ ಹಾಜರಾಗಿಲ್ಲ ಎಂಬುದನ್ನು ಪರಿಗಣಿಸಿ ಶಿಸ್ತು ಕ್ರಮಕ್ಕೆ ಆದೇಶಿಸಿತ್ತು.
ವಂಚನೆಗೆ ಅನುಮತಿಸಲಾಗದು:
ಅರ್ಜಿದಾರರು 2025ರ ಮೇ 8ರಂದು ಅಧಿಕಾರ ವಹಿಸಿಕೊಂಡ ನಂತರವೂ, ಉಳಿದ ವರ್ಷಕ್ಕೆ, ಅಂದರೆ ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಅರ್ಜಿದಾರರು ಉಪ ಕಾರ್ಯದರ್ಶಿಗೆ ಬರೆದ ಪತ್ರವು 2026ರ ಮಾರ್ಚ್ 12ರ ದಿನಾಂಕ ಹೊಂದಿದೆ. ಅದೂ ಜನವರಿ 1ರಂದು ಆಯೋಗ ಆದೇಶ ಹೊರಡಿಸಿದ ಬಳಿಕ ಪತ್ರ ಬರೆಯಲಾಗಿದೆ. ಮಾರ್ಚ್ 12ರಂದು ಬರೆದ ಪತ್ರವನ್ನು ಆಧರಿಸಿರುವುದು ಸಂಪೂರ್ಣವಾಗಿ ತಪ್ಪು ಮಾಹಿತಿಯಾಗಿದ್ದು, ನ್ಯಾಯಾಲಯದ ಅಭಿಪ್ರಾಯದಲ್ಲಿ ಇದು ನ್ಯಾಯಾಲಯವನ್ನು ವಂಚಿಸುವ ಪ್ರಯತ್ನವಾಗಿದೆ, ಇದಕ್ಕೆ ಅನುಮತಿಸಲಾಗದು ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿತು.
ಮೇಲ್ಮನವಿಯನ್ನು ಬುಡಕ್ಕೆ ಹಾಕಿಕೊಂಡು ಕುಳಿತುಕೊಳ್ಳುತ್ತೀರಾ? ಶಿಸ್ತು ಕ್ರಮಕ್ಕೆ ಆದೇಶ ಮಾಡಿರುವುದನ್ನು ಹಿಂಪಡೆಯಲು ಅನುಮತಿಸಲಾಗದು. ನಿಮ್ಮ ಕಚೇರಿಯಲ್ಲಿನ ವ್ಯವಸ್ಥೆ ಸರಿಪಡಿಸಿ. ನೀವು ಮೊದಲ ಮೇಲ್ಮನವಿ ಪ್ರಾಧಿಕಾರಿಯಾಗಿರುವುದರಿಂದ ನಿಮಗೆ ಮಾಹಿತಿ ಒದಗಿಸುವ ವ್ಯವಸ್ಥೆಯನ್ನು ರೂಪಿಸಿ ಎಂದ ನ್ಯಾಯಪೀಠ ಕೆಐಸಿಯ ಆದೇಶಗಳಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಇದೇ ವೇಳೆ, 2023ರ ಮಾರ್ಚ್ 9ರಿಂದ ಶಿವಕುಮಾರ್ ಅವರು 2025 ಮೇ ವರೆಗೆ ಅಧಿಕಾರವಹಿಸಿಕೊಳ್ಳುವವರೆಗೆ ಇದ್ದ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಸಕ್ಷಮ ಪ್ರಾಧಿಕಾರ ಹೊಂದಿದೆ ಎಂದೂ ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
Related Articles
Thank you for your comment. It is awaiting moderation.


Comments (0)