ಶಿವರಾಮ ಕಾರಂತ ಲೇಔಟ್‌ನಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಕ್ಕೆ ಹೈಕೋರ್ಟ್ ಅನುಮತಿ ಕೋರಿದ ಬಿಡಿಎ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಬಿಡಿಎ ಹೈಕೋರ್ಟ್‌ ಅನುಮತಿ ಕೋರಿದೆ.

ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಚಿಸಲಾಗಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್‌ ನಾಯ್ಕ್ ಅವರಿದ್ದ ವಿಶೇಷ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಬಿಡಿಎ ಪರ ಹಾಜರಾದ ಅಡ್ವೊಕೆಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಶಿವರಾಮ ಕಾರಂತ ಬಡಾವಣೆಯಲ್ಲಿ ವಿವಾದದಲ್ಲಿರುವ ನಿವೇಶನಗಳ ಸಂಖ್ಯೆ ಕಡಿಮೆ ಇವೆ. ನಿವೇಶನ ಹಂಚಿಕೆ ಪ್ರಕ್ರಿಯೆಗೆ ಸಾಕಷ್ಟು ಸಮಯ ಹಿಡಿಯಲಿದೆ. ಆದ್ದರಿಂದ, ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲು ಅನುಮತಿ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲು ಅನುಮತಿಸುವ ಬಗ್ಗೆ ಎಲ್ಲ ಅಂಶಗಳನ್ನು ಅವಲೋಕಿಸಿ ಜೂನ್‌ 18ರಂದು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಅಂದಾಜು 3,546 ಎಕರೆ ಪ್ರದೇಶದಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ 2008ರ ಡಿಸೆಂಬರ್ 30ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಸಾಕಷ್ಟು ಕಾನೂನು ಹೋರಾಟದ ಬಳಿಕ ಸುಪ್ರೀಂಕೋರ್ಟ್‌, ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವಂತೆ ಸೂಚನೆ ನೀಡಿತ್ತು.

ಆನಂತರ, 2,700 ಎಕರೆಗೂ ಅಧಿಕ ಪ್ರದೇಶದಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಭೂಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಕುರಿತು ಹೈಕೋರ್ಟ್‌ ಮತ್ತು ಸುಪ್ರಿಂಕೋರ್ಟ್‌ಗಳಲ್ಲಿ ಹಲವು ಸುತ್ತಿನ ಕಾನೂನು ಹೋರಾಟ ನಡೆದು ಅಂತಿಮವಾಗಿ ನ್ಯಾಯಾಲಯಗಳು ಭೂಸ್ವಾಧೀನ ಪ್ರಕ್ರಿಯೆಯನ್ನು ಎತ್ತಿಹಿಡಿದಿದ್ದವು. ಆದರೆ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಹಾಗೂ ಇನ್ನಿತರ ಆರೋಪಗಳು ಕೇಳಿ ಬಂದಿದ್ದವು.

ಈ ಸಂಬಂಧ ಹಲವರು ಸುಪ್ರಿಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರಿಂಕೋರ್ಟ್‌ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ 2020ರ ಡಿಸೆಂಬರ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ರಚನೆ ಮಾಡಿತ್ತು. ಆ ಸಮಿತಿಯು ನ್ಯಾಯಾಲಯದ ನಿರ್ದೇಶನದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿತ್ತು. ಸಮಿತಿಯ ಅವಧಿ 2023ರ ಡಿಸೆಂಬರ್‌ಗೆ ಪೂರ್ಣಗೊಂಡಿತ್ತು.

ಸಮಿತಿಯ ಅಧ್ಯಕ್ಷ ರಾಗಿದ್ದ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್‌ ಅವರು, ಯಾವ ಉದ್ದೇಶಕ್ಕಾಗಿ ಸಮಿತಿ ರಚನೆ ಮಾಡಲಾಗಿತ್ತೋ ಆ ಉದ್ದೇಶ ಬಹುತೇಕ ಈಡೇರಿರುವುದರಿಂದ ಸಮಿತಿ ಮುಂದುವರಿಸುವ ಅಗತ್ಯವಿಲ್ಲ. ಸಮಿತಿ ಅಧಿಕಾರಾವಧಿ ಮುಂದುವರಿಸದೆ ವಿಸರ್ಜನೆ ಮಾಡಬಹುದು ಎಂದು ಹೇಳಿದ್ದರು.

ಆದರೆ, ಸಮಿತಿಯ ಇತರ ಸದಸ್ಯರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಹಲವು ದೂರುಗಳಿದ್ದು, ಅವುಗಳನ್ನು ಪರಿಹರಿಸಬೇಕಾಗಿರುವುದರಿಂದ ಸಮಿತಿಯ ಅಧಿಕಾರಾವಧಿ ಆರು ತಿಂಗಳು ವಿಸ್ತರಣೆ ಮಾಡಬೇಕೆಂದು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರಿಂಕೋರ್ಟ್‌ ಆ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಿ ಅದೇ ಸಮಿತಿಯ ಮುಂದುವರಿಕೆ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ, ರಾಜ್ಯ ಹೈಕೋರ್ಟ್‌‌ ಮುಖ್ಯ ನ್ಯಾಯಮೂರ್ತಿಗಳು ವಿಶೇಷ ವಿಭಾಗೀಯ ನ್ಯಾಯಪೀಠ ರಚನೆ ಮಾಡಿದ್ದಾರೆ.

Related Articles

Comments (0)

Leave a Comment