ಜಿ.ಪಂ, ತಾ.ಪಂ ಮೀಸಲಾತಿ ನಿಗದಿ ವಿಳಂಬಕ್ಕೆ ಹೈಕೋರ್ಟ್ ಕ್ಷಮೆ ಯಾಚಿಸಿದ ಸರ್ಕಾರ; ಮತ್ತೆ 8 ವಾರ ಕಾಲಾವಕಾಶಕ್ಕೆ ಮನವಿ
- by Prashanth Basavapatna
- June 5, 2026
- 5 Views
ಬೆಂಗಳೂರು: ಕಳೆದ 5 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಚುನಾವಣೆ ವಿಳಂಬವಾಗಿರುವುದಕ್ಕೆ ಹೈಕೋರ್ಟ್‌ನ ಕ್ಷಮೆ ಯಾಚಿಸಿರುವ ರಾಜ್ಯ ಸರ್ಕಾರ, ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತೆ 8 ವಾರ ಕಾಲಾವಕಾಶ ಕೇಳಿದೆ.
ರಾಜ್ಯದ ಎಲ್ಲ ಜಿ.ಪಂ. ಹಾಗೂ ತಾ.ಪಂ.ಗಳಿಗೆ 12 ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು 2023 ಡಿಸೆಂಬರ್ 19ರಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಲಿಖಿತ ಭರವಸೆ ನೀಡಿತ್ತು. ಆದರೆ, ಕೊಟ್ಟ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ ಎಂದು ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಸರ್ಕಾರದ ವಿರುದ್ಧ 2024ರಲ್ಲಿ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ. ರಂದೀಪ್ ಅವರು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದು, ಮೀಸಲಾತಿ ನಿಗದಿ ಪ್ರಕ್ರಿಯೆಗೆ ವಿಳಂಬವಾದ ಕಾರಣಗಳನ್ನು ವಿವರಿಸಿದ್ದಾರೆ. ಸರ್ಕಾರದಿಂದ ಉದ್ದೇಶಪೂರ್ವಕವಾಗಿ ವಿಳಂಬವಾಗಿಲ್ಲ, ನ್ಯಾಯಾಲಯದ ಆದೇಶ ಪಾಲನೆಯಲ್ಲೂ ವಿಳಂಬವಾಗಿಲ್ಲ. ಆದರೆ, ಆಗಿರುವ ವಿಳಂಬಕ್ಕೆ ಕ್ಷಮೆ ಯಾಚಿಸುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.
ಕಂದಾಯ ಇಲಾಖೆಯು ವಿಜಯಪುರ ಜಿಲ್ಲೆಯ 4 ಹಾಗೂ ಬಾಗಲಕೋಟೆ ಜಿಲ್ಲೆಯ ತಾಲೂಕುಗಳ ಗಡಿಗಳನ್ನು ಬದಲಾಯಿಸಿ ಅಧಿಸೂಚನೆ ಹೊರಡಿಸಿತ್ತು. ಆದ್ದರಿಂದ, ಈ ಎರಡು ಜಿಲ್ಲೆಗಳ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಗಡಿಗಳನ್ನು ಮರು ನಿಗದಿಪಡಿಸಬೇಕಾಯಿತು. ಅದರಂತೆ ಈಗಾಗಲೇ ವಿಜಯಪುರ ಜಿಲ್ಲೆಯ ನಾಲ್ಕು ತಾಲೂಕುಗಳ ತಾ.ಪಂ, ಜಿ.ಪಂ. ಕ್ಷೇತ್ರಗಳ ಗಡಿಗಳನ್ನು ಮರುನಿಗದಿಪಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ಉಳಿದಂತೆ ಬಾಗಲಕೋಟೆ ಜಿಲ್ಲೆಯ ತಾಲೂಕುಗಳ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರಗಳ ಗಡಿಗಳ ಮರು ನಿಗದಿ ಹಾಗೂ ಮೀಸಲಾತಿ ನಿಗದಿಗೆ 12 ವಾರ ಕಾಲಾವಕಾಶ ಬೇಕಾಗಿದೆ. ಇದನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ತಾ.ಪಂ, ಜಿ.ಪಂ ಕ್ಷೇತ್ರ ಮರುವಿಂಗಡಣೆ ಪೂರ್ಣಗೊಂಡಿದ್ದು, ಅವುಗಳಿಗೆ ಮೀಸಲಾತಿ ನಿಗದಿಪಡಿಸಲು 8 ವಾರ ಕಾಲಾವಕಾಶ ಬೇಕು ಎಂದು ಪ್ರಮಾಣಪತ್ರದಲ್ಲಿ ಮನವಿ ಮಾಡಲಾಗಿದೆ.
ಸರ್ಕಾರದ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟಂಬರ್ 11ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)