ಪೊಲೀಸ್ ಕ್ವಾರ್ಟರ್ಸ್ ಜಾಗ ಖಾಸಗಿಯವರಿಗೆ ಮಾರಾಟ; ಹೈಕೋರ್ಟ್ ಕಟ್ಟಡವೂ ಸುರಕ್ಷಿತವಲ್ಲ ಎಂದು ಜಡ್ಜ್ ಕಳವಳ
- by Prashanth Basavapatna
- June 4, 2026
- 4 Views
ಬೆಂಗಳೂರು: ನಗರದ ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿರುವ ಪೊಲೀಸ್ ವಸತಿಗೃಹದ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ ಎಂಬ ವಿಚಾರಕ್ಕೆ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಇದಕ್ಕೆ ಅವಕಾಶ ಮಾಡಿಕೊಟ್ಟರೆ ಹೈಕೋರ್ಟ್ ಕಟ್ಟಡವೂ ಸುರಕ್ಷಿತವಾಗಿರುವುದಿಲ್ಲ ಎಂದು ಮೌಖಿಕವಾಗಿ ಹೇಳಿದೆ.
ಸರ್ಕಾರಿ ಸ್ವತ್ತಾದ ಪೊಲೀಸ್ ಕ್ವಾರ್ಟರ್ಸ್ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಶಿವಮೊಗ್ಗದ ಶ್ರೀನಾಥ್ ನಗರಗದ್ದೆ (ಮೂರನೇ ಆರೋಪಿ) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಪೊಲೀಸ್ ಕ್ವಾರ್ಟರ್ಸ್ ಇರುವ ಜಾಗ ಎಂ.ಆರ್. ಮಹಾಲಕ್ಷ್ಮೀ (ಮೊದಲ ಆರೋಪಿ) ಅವರಿಗೆ ಸೇರಿದೆ. ಮಹಾಲಕ್ಷ್ಮೀ ಅವರು ತಮ್ಮ ಆಸ್ತಿ ಎಂದು ಮಾರಾಟ ಮಾಡಿದ್ದು, ಅವರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಲಾಗಿದೆ. ಇದು ಮಹಾಲಕ್ಷ್ಮೀ ಅವರಿಗೆ ಸೇರಿದ ಜಾಗ ಎಂಬುದಕ್ಕೆ ಪೂರಕವಾಗಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲಾಗಿದೆ. ಋಣಭಾರ ಪ್ರಮಾಣಪತ್ರವೂ (ಎನ್ಕಂಬರೆನ್ಸ್ ಸರ್ಟಿಫಿಕೇಟ್) ಆರೋಪಿ ಹೆಸರಿನಲ್ಲಿದೆ. ಆಕ್ಷೇಪಾರ್ಹ ಜಾಗ ಪೊಲೀಸ್ ಇಲಾಖೆಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಯನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿಲ್ಲ ಎಂದರು.
ಅದಕ್ಕೆ ನ್ಯಾಯಪೀಠ, ಇದಕ್ಕಾಗಿಯೇ ನಾನು ಹೇಳಿದ್ದು, ಇದಕ್ಕೆ ಅವಕಾಶ ನೀಡಿದರೆ ಈ (ಹೈಕೋರ್ಟ್) ಕಟ್ಟಡವೂ ಸುರಕ್ಷಿತವಾಗಿರುವುದಿಲ್ಲ ಎಂದಿತಲ್ಲದೆ, ಪೊಲೀಸರೇ ಒತ್ತುವರಿದಾರರೇ? ಎಂದು ಪ್ರಶ್ನಿಸಿತು.
ಇದಕ್ಕೆ ಅರುಣ್ ಶ್ಯಾಮ್ ಅವರು, ಈ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್‌ನಲ್ಲಿ ಎರಡು ದಾವೆಗಳು ದಾಖಲಾಗಿದ್ದು, ಒಂದರಲ್ಲಿ ಪೊಲೀಸರು ಪಕ್ಷಕಾರರಾಗಿದ್ದಾರೆ. ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರವು ಒಂದೇ ಒಂದು ದಾಖಲೆ ಹಾಜರುಪಡಿಸಿದರೂ ಅರ್ಜಿ ಹಿಂಪಡೆಯಲಾಗುವುದು ಎಂದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಆಕ್ಷೇಪಾರ್ಹ ಜಾಗವು 1930ರಿಂದಲೂ ಪೊಲೀಸ್ ಇಲಾಖೆಗೆ ಸೇರಿದೆ ಎಂದು ತಿಳಿಸಿದರು.
ಆಗ ನ್ಯಾಯಪೀಠ, ನಿಮ್ಮ ಧೈರ್ಯವನ್ನು ಮೆಚ್ಚಬೇಕು. ಪೊಲೀಸ್ ಕ್ವಾರ್ಟರ್ಸ್ ಅನ್ನು ನೀವು ಮಾರಾಟ ಮಾಡಿದ್ದೀರಿ. ಕಳೆದ 15 ವರ್ಷಗಳಿಂದ ಪೊಲೀಸ್ ಕ್ವಾರ್ಟರ್ಸ್ ಇರುವ, ಪೊಲೀಸರು ನೆಲೆಸಿರುವ ಜಾಗವನ್ನು ನೀವು ಮಾರಾಟ ಮಾಡಿದ್ದೀರಿ ಎಂದು ಹೇಳಿತು.
ಆಗ ಅರುಣ್ ಶ್ಯಾಮ್ ಅವರು, ಅಗ್ರಿಮೆಂಟ್ ಮಾಡಿಸಿಕೊಂಡಿರುವವರನ್ನು ಪ್ರತ್ಯೇಕಿಸಿ ಪ್ರಕರಣ ದಾಖಲಿಸಲಾಗಿದೆ. ಮಾಲೀಕರು ಎಂದು ಹೇಳಿಕೊಂಡಿರುವವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದರು. ಇದನ್ನು ಆಲಿಸಿದ ನ್ಯಾಯಪೀಠ ಜೂನ್ 9ರಂದು ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)