ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾನ್ವಿ ತಾಲೂಕಿಗೆ ಗಡಿಪಾರು; ಮಹೇಶ್ ಶೆಟ್ಟಿ ತಿಮರೋಡಿ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಗಡಿಪಾರು ಆದೇಶ ರದ್ದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 30ರಂದು ವಜಾಗೊಳಿಸಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸುವಂತೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ತಿಮರೋಡಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿ, ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.

ಇದೇ ವೇಳೆ ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸುವವರೆಗೆ ಗಡಿಪಾರು ಆದೇಶ ಜಾರಿಗೊಳಿಸದಂತೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸುವಂತೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆದರೆ, ಈ ಮನವಿಯನ್ನು ವಿಭಾಗೀಯ ನ್ಯಾಯಪೀಠ ತಳ್ಳಿಹಾಕಿತು.

ಇದಕ್ಕೂ ಮುನ್ನ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಅರ್ಜಿದಾರರು 1997ರಿಂದಲೂ ಹಲವು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ತಾನು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಾ ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ, ಬೆಳ್ತಂಗಡಿ ಪೊಲೀಸರು ಇತರ ಕೆಲಸಗಳಿಗಿಂತ ಹೆಚ್ಚಾಗಿ ಈ ವ್ಯಕ್ತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ನಿವಾರಣೆಯಲ್ಲೇ ಸಮಯ ಕಳೆಯುವಂತಾಗಿದೆ. 26 ಪ್ರಕರಣಗಳು ವಿಚಾರಣಾ ಹಂತದಲ್ಲಿ ಬಾಕಿ ಇವೆ. ಇದಲ್ಲದೇ ಇತ್ತಿಚಿನ ದಿನಗಳಲ್ಲಿ ತಿಮರೋಡಿ ವಿರುದ್ಧ ಐದು ಎಫ್ಐಆರ್‌ಗಳು ದಾಖಲಾಗಿವೆ ಎಂದು ಗಡಿಪಾರು ಆದೇಶವನ್ನು ಸಮರ್ಥಿಸಿದರು.

ತಿಮರೋಡಿ ಪರ ವಕೀಲ ಎಂ.ಆರ್‌. ಬಾಲಕೃಷ್ಣ ಅವರು, ಕ್ರಿಮಿನಲ್‌ ಪ್ರಕರಣಗಳು ಬಾಕಿ ಇರುವುದರಿಂದ ಗಡಿಪಾರು ಆದೇಶ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. 38, 29, 26, 25 ವರ್ಷದ ಹಳೆಯ ಪ್ರಕರಣಗಳಾಗಿದ್ದು, ಅವುಗಳಲ್ಲಿ ತಿಮರೋಡಿ ಖುಲಾಸೆಯಾಗಿದ್ದಾರೆ. 13 ಪ್ರಕರಣಗಳಲ್ಲಿ ಖುಲಾಸೆಯಾಗಿದ್ದು, ಎರಡು ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಸಲ್ಲಿಕೆಯಾಗಿದೆ. 10 ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ನಂಬಲರ್ಹ ಮಾಹಿತಿ ಆಧರಿಸಿ ಗಡಿಪಾರು ಆದೇಶ ಮಾಡಲಾಗಿದೆಯೇ ಎಂಬುದನ್ನು ನೋಡಬೇಕು. ಧರ್ಮಸ್ಥಳ ಕಾನೂನಿಗಿಂತ ಮಿಗಿಲಲ್ಲ. ಅದು ರಾಜ್ಯದ ಒಳಗೇ ಇದೆ. ಸೌಜನ್ಯಾ ಕೊಲೆ ಪ್ರಕರಣದ ಹೋರಾಟದಲ್ಲಿ ಭಾಗಿಯಾಗಿರುವುದಕ್ಕೆ ಅರ್ಜಿದಾರರನ್ನು ಗಡಿಪಾರು ಮಾಡಲಾಗಿದೆ ಎಂದರು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಪೀಠ, ರೌಡಿ ನಡವಳಿಕೆ, ಬೆದರಿಕೆಯಿಂದಾಗಿ ಸಾಕ್ಷಿಗಳು ಸಾಕ್ಷ್ಯ ನುಡಿಯದೇ ಇರುವುದರಿಂದ ನೀವು ಖುಲಾಸೆಯಾಗಿದ್ದೀರಿ, ನೀವು ರೌಡಿಯಾಗಿರುವುದರಿಂದ ಜನ ನಿಮ್ಮ ವಿರುದ್ಧ ಸಾಕ್ಷಿ ನುಡಿಯಲು ಬರುತ್ತಿಲ್ಲ ಎಂಬುದು ವರದಿಯಲ್ಲಿನ ಆರೋಪವಾಗಿದೆ. ಧಾರ್ಮಿಕ ವ್ಯಕ್ತಿಗಳಲ್ಲದವರ ಅಂಗಡಿ ಮುಂಗಟ್ಟಿಗೆ ಹೋಗಿ ಅಡ್ಡಿಪಡಿಸುತ್ತಿರುವುದರಿಂದ ಅವರು ನಿಮ್ಮ ವಿರುದ್ಧ ಸಾಕ್ಷಿ ನುಡಿಯುತ್ತಿಲ್ಲ ಎಂದು ಆರೋಪಿಸಲಾಗಿದೆ ಎಂದು ಮೌಖಿಕವಾಗಿ ಹೇಳಿತು.

ಪ್ರಕರಣದ ಹಿನ್ನೆಲೆ:
ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿಗಳು 2026ರ ಮಾರ್ಚ್ 13ರಂದು (ಮೂರನೇ ಬಾರಿ) ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಆಲಿಸಿದ್ದ ಏಕಸದಸ್ಯ ನ್ಯಾಯಪೀಠ, ಉಪ ವಿಭಾಗಾಧಿಕಾರಿಗಳ ಆದೇಶ ಪ್ರಶ್ನಿಸಿ ರಾಜ್ಯ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಆದ್ದರಿಂದ, ಅರ್ಜಿ ವಿಚಾರಣೆಗೆ ಊರ್ಜಿತವಾಗುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತಲ್ಲದೆ, ಅರ್ಜಿದಾರರು ಗೃಹ ಕಾರ್ಯದರ್ಶಿಗಳ ಮುಂದೆ ಮೇಲ್ಮನವಿ ಸಲ್ಲಿಸುವ ಸಲುವಾಗಿ ಮುಂದಿನ 2 ವಾರಗಳ ಕಾಲ ಗಡಿಪಾರು ಸಂಬಂಧ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶದಂತೆ ಸರ್ಕಾರದ ಮುಂದೆ ಮೇಲ್ಮನವಿ ಸಲ್ಲಿಸುವ ಬದಲು ತಿಮರೋಡಿ ಏಕಸದಸ್ಯ ನ್ಯಾಯಪೀಠದ ಆದೇಶವನ್ನೇ ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Related Articles

Comments (0)

Leave a Comment