ಸಂಧಾನ ಸಭೆ ನಡೆಯುವ ಮಧ್ಯೆ ಮುಷ್ಕರ ಬೇಡ; ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳಿಗೆ ಹೈಕೋರ್ಟ್ ತಾಕೀತು
- by Jagan Ramesh
- June 3, 2026
- 57 Views
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರವನ್ನು ನಿರ್ಬಂಧಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿರುವ ಹೈಕೋರ್ಟ್, ಕಾರ್ಮಿಕ ಸಂಘಟನೆಗಳು ಹಾಗೂ ರಾಜ್ಯ ಸರ್ಕಾರದ ನಡುವೆ ಜೂನ್ 10ರಂದು ಸಂಧಾನ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಇದರ ನಡುವೆ ಯಾವುದೇ ಮುಷ್ಕರ ನಡೆಸದಂತೆ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಿದೆ.
ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಪ್ರಶ್ನಿಸಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿರುವ ಸಿ. ವೇದವತಿ ಹಾಗೂ ಕಟ್ಟಡ ಕಾರ್ಮಿಕ ಎಚ್.ವಿ. ಶ್ರೀಧರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ, ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಪರವಾಗಿ ಹಾಜರಿದ್ದ ವಕೀಲೆ ಮೈತ್ರೇಯಿ ಕೃಷ್ಣನ್ ಅವರು, ಕಾರ್ಮಿಕ ಸಂಘಟನೆಗಳು ಹಾಗೂ ನಿಗಮಗಳ ನಡುವಿನ ಸಂಧಾನ ಪ್ರಕ್ರಿಯೆಯನ್ನು ಜೂನ್ 10ರಂದು ರಾಜ್ಯ ಕಾರ್ಮಿಕ ಇಲಾಖೆಯ ಮುಂದೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರಲ್ಲದೆ, ಸಂಧಾನ ಸಭೆಯ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ನ್ಯಾಯಪೀಠ, ನಾವು ಕೇವಲ ಕಾನೂನಿನ ಅಂಶಗಳ ಬಗ್ಗೆ ಪರಿಶೀಲಿಸಲಿದ್ದೇವೆ, ಯಾವುದೇ ಹೆಚ್ಚಿನ ವಾದಗಳನ್ನು ಆಲಿಸುವುದಿಲ್ಲ. ಸದ್ಯ ಪರೀಕ್ಷೆಗಳು ಬಾಕಿ ಉಳಿದಿದ್ದು, ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಲಿದೆ ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ. ಮುಷ್ಕರವು ಸಾರ್ವಜನಿಕರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ, ಸಾರಿಗೆ ವ್ಯವಸ್ಥೆಯಂತಹ ಅಗತ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಹೇಳಿತು.
ಜಂಟಿ ಕ್ರಿಯಾ ಸಮಿತಿಯ ಪರ ವಕೀಲರು ವಿಚಾರಣೆಯನ್ನು ಮುಂದೂಡುವಂತೆ ಮತ್ತೊಮ್ಮೆ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿತಲ್ಲದೆ, ಈ ಮಧ್ಯೆ ಯಾವುದೇ ಮುಷ್ಕರ ನಡೆಸಬೇಡಿ ಎಂದು ಕಾರ್ಮಿಕ ಸಂಘಟನೆಗಳಿಗೆ ಎಚ್ಚರಿಕೆ ನೀಡಿತು.
ಇದಕ್ಕೆ ಪ್ರತಿಕ್ರಿಯಿಸಿದ ವಕೀಲೆ ಮೈತ್ರೇಯಿ ಅವರು, ನ್ಯಾಯಾಲಯದ ಆದೇಶವಿದ್ದು, ನಾವು ಅದನ್ನು ಮೀರಿ ನಡೆದಿಲ್ಲ ಎಂದು ತಿಳಿಸಿದರು. ಅಂತಿಮವಾಗಿ ನ್ಯಾಯಪೀಠ, ಮುಷ್ಕರಕ್ಕೆ ತಡೆ ನೀಡಿ ಮೇ 19ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆಯ ದಿನಾಂಕದವರೆಗೆ ವಿಸ್ತರಿಸಿತು.
ಪ್ರಕರಣವೇನು?
ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿದ್ದ ಮುಷ್ಕರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಸಂಚರಿಸುತ್ತಿದ್ದು, ಇದರಲ್ಲಿ ಶೇ. 60 ಮಂದಿ ಮಹಿಳೆಯರಾಗಿದ್ದಾರೆ. ಪ್ರಸ್ತಾಪಿತ ಮುಷ್ಕರದಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ದಿನಗೂಲಿ ಅವಲಂಬಿಸಿರುವವರು, ರೋಗಿಗಳು, ವಯಸ್ಕರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ಸಾರ್ವಜನಿಕ ಬಸ್ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೂ ಸಮಸ್ಯೆಯಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.
ಅರ್ಜಿಯನ್ನು ಮೇ 19ರಂದು ವಿಚಾರಣೆ ನಡೆಸಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ, ಮುಷ್ಕರವನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ನೀಡಿತ್ತು. ಅರ್ಜಿಯನ್ನು ಮತ್ತೆ ಮೇ 21ರಂದು ವಿಚಾರಣೆ ನಡೆಸಿದ್ದ ರಜಾಕಾಲದ ನ್ಯಾಯಪೀಠ, ಮಧ್ಯಂತರ ಆದೇಶವನ್ನು ಜೂನ್ 2ರವರೆಗೆ ವಿಸ್ತರಿಸಿತ್ತಲ್ಲದೆ, ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ನಡುವಿನ ತಿಕ್ಕಾಟದಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು. ಆದ್ದರಿಂದ, ರಾಜೀ ಸಂಧಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರ್ಕಾರ ಮತ್ತು ಜಂಟಿ ಕ್ರಿಯಾ ಸಮಿತಿಗೆ ಸಲಹೆ ನೀಡಿತ್ತು.
Related Articles
Thank you for your comment. It is awaiting moderation.



Comments (0)