ಚೆಲುವ ನಾರಾಯಣಸ್ವಾಮಿ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ರಚನೆಗೆ ಕೋರಿ ಪಿಐಎಲ್; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮೇಲುಕೋಟೆ ನಿವಾಸಿ ಹಾಗೂ ದೇವಸ್ಥಾನದ ಭಕ್ತರಾದ ವಿದ್ವಾನ್ ಡಾ. ಎಂ.ಪಿ. ನರಸಿಂಹನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್, ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತಲ್ಲದೆ, ಅರ್ಜಿಗೆ ಪ್ರತಿಕ್ರಿಯಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿತು.

ಅರ್ಜಿಯಲ್ಲೇನಿದೆ?
ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಕಾಯ್ದೆ-1977ರ ಪ್ರಕಾರ ಚೆಲುವ ನಾರಾಯಣಸ್ವಾಮಿ ದೇವಸ್ಥಾನವು ಎ ದರ್ಜೆ ದೇವಸ್ಥಾನವಾಗಿದ್ದು, ವಾರ್ಷಿಕ 25 ಲಕ್ಷ ರೂ. ಆದಾಯ ಹೊಂದಿದೆ. ಕಾಯ್ದೆಯ ಸೆಕ್ಷನ್ 25ರ ಪ್ರಕಾರ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸಬೇಕು. ಕೊನೆಯ ಬಾರಿಗೆ ರಚಿಸಲಾಗಿದ್ದ ಸಮಿತಿಯ ಅವಧಿಯು 2013-14ನೇ ಸಾಲಿಗೆ ಮುಗಿದಿದ್ದು, ಕಳೆದ 12-13 ವರ್ಷಗಳಿಂದ ಆಡಳಿತಾಧಿಕಾರಿಯೇ ದೇವಸ್ಥಾನದ ನಿರ್ವಹಣೆ ಮಾಡುತ್ತಿದ್ದಾರೆ. 2023ರಲ್ಲಿ ವ್ಯವಸ್ಥಾಪನಾ ಸಮಿತಿ ರಚನೆಗೆ ಅಧಿಸೂಚನೆ ಹೊರಡಿಸಲಾಗಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ವ್ಯವಸ್ಥಾಪನಾ ಸಮಿತಿಗೆ ತಮ್ಮನ್ನು ಪರಿಗಣಿಸುವಂತೆ ಹಾಗೂ 2023ರ ಅಧಿಸೂಚನೆಯಂತೆ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಗಣಿಸಲಾಗಿಲ್ಲ. ಆದ್ದರಿಂದ, ತಕ್ಷಣ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Articles

Comments (0)

Leave a Comment