ಯೋಗೀಶ ಗೌಡರ್ ಕೊಲೆ ಪ್ರಕರಣ; ವಿನಯ ಕುಲಕರ್ಣಿ ಮೇಲ್ಮನವಿ ಜೂನ್ 2ಕ್ಕೆ ಮುಂದೂಡಿದ ಹೈಕೋರ್ಟ್
- by LegalSamachar
- May 26, 2026
- 5 Views
ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೀಶ ಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಅಪರಾಧಿಗಳಾದ ವಿನಯ ಕುಲಕರ್ಣಿ ಹಾಗೂ ಚಂದ್ರಶೇಖರ್ ಇಂಡಿ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್ ಜೂನ್ 2ಕ್ಕೆ ಮುಂದೂಡಿದೆ.
ಶಿಕ್ಷೆ ರದ್ದು ಕೋರಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿರುವ ಮಾಜಿ ಶಾಸಕ ವಿನಯ ಕುಲಕರ್ಣಿ (ಎ15) ಹಾಗೂ ಚಂದ್ರಶೇಖರ್ ಇಂಡಿ (ಎ16), ಮೇಲ್ಮನವಿ ಇತ್ಯರ್ಥವಾಗುವವರೆಗೆ ಶಿಕ್ಷೆ ಅಮಾನತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ. ಮೇಲ್ಮನವಿಗಳನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಮೇಲ್ಮನವಿ ಆಲಿಸಿದ ನ್ಯಾಯಪೀಠ, ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಬೇಕೆಂಬ ಮೇಲ್ಮನವಿದಾರರ ಮಧ್ಯಂತರ ಮನವಿ ಕುರಿತು ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ವಿಚಾರಣೆ ವೇಳೆ ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿ, ಜೀವಾವಧಿ ಶಿಕ್ಷೆಯಾಗಿರುವುದರಿಂದ ಕುಲಕರ್ಣಿ ಅವರು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸದ್ಯ ಖಾಲಿಯಿರುವ ಅವರ ಸ್ಥಾನಕ್ಕೆ ಮಧ್ಯಂತರ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಣೆ ಮಾಡುವ ಸಾಧ್ಯತೆಯಿದೆ. ಆದ್ದರಿಂದ, ಚುನಾವಣೆ ಘೋಷಣೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ಕೋರಿದರಲ್ಲದೆ, ನಮ್ಮ ಮೇಲ್ಮನವಿಗೆ ಸಿಬಿಐ ಇನ್ನೂ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ವಿನಯ ಕುಲಕರ್ಣಿ ಪರ ಮತ್ತೋರ್ವ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಆಕ್ಷೇಪಣೆ ಸಲ್ಲಿಸದಿದ್ದರೆ ವಿಚಾರಣೆ ಮುಂದುವರಿಸಲಾಗುವುದು ಎಂದು ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದರು.
ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್ ಅವರು, ಆಕ್ಷೇಪಣೆ ಸಿದ್ಧವಾಗಿದೆ ಇಂದು ಸಂಜೆಯ ವೇಳೆಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದಕ್ಕೆ ಸಿ.ವಿ. ನಾಗೇಶ್ ಅವರು, ಶಿಕ್ಷೆ ಅಮಾನತು ಮಾಡಲು ಮನವಿ ಮಾಡಲಾಗಿದೆ. ಸಿಬಿಐ ಆಕ್ಷೇಪಣೆ ಸಲ್ಲಿಸದಿದ್ದರೂ ನ್ಯಾಯಾಲಯ ವಿಚಾರಣೆ ಮುಂದುವರಿಸಬಹುದು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿನಯ ಕುಲಕರ್ಣಿ ಮತ್ತು ಚಂದ್ರಶೇಖರ್ ಇಂಡಿ ಅವರ ಶಿಕ್ಷೆ ಅಮಾನತು ಕೋರಿರುವ ಮನವಿಗಳನ್ನು ಈಗ ವಿಚಾರಣೆ ನಡೆಸುವುದಿಲ್ಲ. ರಜಾಕಾಲ ಮುಗಿದ ಬಳಿಕ ವಿಚಾರಣೆ ನಡೆಸಬಹುದು. ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಜೂನ್ 2ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.



Comments (0)