ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್ ನಿರ್ಬಂಧ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಮುಷ್ಕರ ಪ್ರಶ್ನಿಸಿ ಬೆಂಗಳೂರಿನಲ್ಲಿ ಮನೆಗೆಲಸ ಮಾಡುತ್ತಿರುವ ಸಿ. ವೇದವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌.ವಿ. ಶ್ರೀಧರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಹಾಗೂ ನ್ಯಾ. ಡಾ. ಕೆ. ಮನ್ಮಥ ರಾವ್‌ ಅವರಿದ್ದ ರಜಾಲಾಲದ ವಿಭಾಗೀಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ವಿವಿಧ ಯೂನಿಯನ್‌ಗಳ ನೇತೃತ್ವ ವಹಿಸಿರುವ ಜಂಟಿ ಕ್ರಿಯಾ ಸಮಿತಿಯ ಏಪ್ರಿಲ್ 29ರ ನೋಟಿಸ್‌ ಆಧರಿಸಿ ಮುಷ್ಕರ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಮಧ್ಯಂತರ ಆದೇಶ ಮಾಡಿತಲ್ಲದೆ, ಸಾರಿಗೆ ಸಚಿವರು ಅಥವಾ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಯಾವಾಗ ಜಂಟಿ ಕ್ರಿಯಾ ಸಮಿತಿಯ ಜತೆ ಸಭೆ ನಡೆಸಲಾಗುತ್ತದೆ ಎಂಬ ಬಗ್ಗೆ ಗುರುವಾರ ತಿಳಿಸಬೇಕು ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚಿಸಿ, ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಪರ ವಕೀಲ ಕ್ಲಿಫ್ಟನ್‌ ಡಿ. ರೊಜಾರಿಯೋ ವಾದ ಮಂಡಿಸಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಸರಿಯಾಗಿ ಈಡೇರಿಸಿಲ್ಲ. ಕಾನೂನಿನ ಪ್ರಕಾರವೇ ಮುಷ್ಕರ ನಡೆಸಲು ನೋಟಿಸ್‌ ನೀಡಲಾಗಿದೆ. ಅದನ್ನು ಪರಿಗಣಿಸದೇ ಸರ್ಕಾರವೇ ಈ ಸಂದರ್ಭ ನಿರ್ಮಾಣ ಮಾಡಿದೆ ಎಂದರು.

ಈ ಹಂತದಲ್ಲಿ ನ್ಯಾಯಪೀಠ, ಈಗ ಮುಷ್ಕರ ಬೇಡ. ಈಗಾಗಲೇ ನಿಮಗೆ ಶೇ.12.5 ವೇತನ ಪರಿಷ್ಕರಣೆ ನೀಡಲಾಗಿದೆ. 450 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಇನ್ನೊಂದು 200 ಕೋಟಿ ರೂಪಾಯಿ ಬಿಡುಗಡೆಗೆ ಪ್ರಯತ್ನಿಸೋಣ ಎಂದು ಹೇಳಿತಲ್ಲದೆ, ಸಭೆ ಯಾವಾಗ ನಡೆಸುತ್ತೀರಿ? ಎಂದು ಸರ್ಕಾರವನ್ನು ಪ್ರಶ್ನಿಸಿತು.

ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಾರಾನಾಥ್‌ ಅವರು, ಈ ಕುರಿತು ಸೂಚನೆ ಪಡೆಯಲಾಗುವುದು ಅದಕ್ಕಾಗಿ ಎರಡು ದಿನ ಕಾಲಾವಕಾಶ ನೀಡುವಂತೆ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಮುಖ್ಯಮಂತ್ರಿ ಅಥವಾ ಸಾರಿಗೆ ಸಚಿವರು, ಸಾರಿಗೆ ಇಲಾಖೆ ಕಾರ್ಯದರ್ಶಿಯವರು ಜಂಟಿ ಕ್ರಿಯಾ ಸಮಿತಿ ಜತೆಗೆ ಯಾವಾಗ ಸಭೆ ನಡೆಸುತ್ತದೆ ಎಂಬುದನ್ನು ಮುಂದಿನ ವಿಚಾರಣೆ ವೇಳೆ ತಿಳಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು, ಈಗಾಗಲೇ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಆರಂಭವಾಗಿವೆ. ಮುಷ್ಕರದಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗಲಿದೆ ಎಂದರು.

ಅರ್ಜಿಯಲ್ಲೇನಿದೆ?
ರಾಜ್ಯ ಸರ್ಕಾರವು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯ್ದೆ (ಎಸ್ಮಾ) ಅಡಿ 2026ರ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಿದೆ. ಈ ಕಾಯ್ದೆಯ ಸೆಕ್ಷನ್‌ 4 ಹಾಗೂ 5ರ ಅಡಿ ಮುಷ್ಕರದಲ್ಲಿ ಭಾಗವಹಿಸಿದರೆ ಹಾಗೂ ಭಾಗವಹಿಸುವಂತೆ ಪ್ರಚೋದಿಸುವ ವ್ಯಕ್ತಿಯನ್ನು 6 ತಿಂಗಳು ಜೈಲಿನಲ್ಲಿ ಇಡಬಹುದಾಗಿದೆ. ಕೈಗಾರಿಕಾ ವಿವಾದಗಳ ಕಾಯ್ದೆ ಅಡಿಯಲ್ಲೂ ಸಾರಿಗೆ ಸಂಸ್ಥೆಗಳ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಕೈಗಾರಿಕಾ ವಿವಾದ ಕಾಯ್ದೆ ಸೆಕ್ಷನ್‌ 22(1)(ಎ) ಅನ್ವಯ ಮುಷ್ಕರ ನಡೆಸುವ 14 ದಿನ ಮುಂಚಿತವಾಗಿ ಭಿತ್ತಿಪತ್ರ ಬಿಡುಗಡೆ ಮಾಡಬೇಕು. ಆದರೆ, ಇದನ್ನು ಐದಾರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸಾರ್ವಜನಿಕ ಬಸ್‌ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಸಂಚಾರ ಮಾಡುತ್ತಿದ್ದು, ಇದರಲ್ಲಿ ಶೇ. 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳು ಮೇ 18ರಿಂದ 25ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ದಿನಗೂಲಿ ಅವಲಂಬಿಸಿರುವವರು, ರೋಗಿಗಳು, ವಯಸ್ಕರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರು ಸಾರ್ವಜನಿಕ ಬಸ್‌ ಅವಲಂಬಿಸಿದ್ದು, ಮುಷ್ಕರದಿಂದ ಅವರಿಗೆ ಸಮಸ್ಯೆಯಾಗಲಿದೆ ಎಂದು ವಿವರಿಸಲಾಗಿದೆ.

ಈ ಹಿಂದೆ 2023 ಹಾಗೂ 2025ರಲ್ಲಿ ಹೈಕೋರ್ಟ್‌ ಮಧ್ಯಪ್ರವೇಶದಿಂದ ಮುಷ್ಕರ ಹಿಂಪಡೆಯಲಾಗಿತ್ತು. 2025ರಲ್ಲಿ ಹೈಕೋರ್ಟ್‌ ಆದೇಶದ ಹೊರತಾಗಿಯೂ ಸಾರ್ವಜನಿಕ ಬಸ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದು, 17,200 ಷೋಕಾಸ್‌ ನೋಟಿಸ್‌ಗಳನ್ನು ಜಾರಿ ಮಾಡಬೇಕಿದೆ. 2025ರ ಏಪ್ರಿಲ್ 1ರಂದು ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿಯ ವೇತನದಲ್ಲಿ ಶೇ 12.5 ಪ್ರಮಾಣದಲ್ಲಿ ಪರಿಷ್ಕರಿಸಿದ್ದು, 1,271.92 ಕೋಟಿ ರೂ. ಹಂಚಿಕೆ ಮಾಡಿದೆ. ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಂಧಾನ ಸಂಬಂಧಿತ ವಿಚಾರಣೆಯು ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಮುಷ್ಕರ ನಡೆಸದಂತೆ ಕೆಎಸ್ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಹಾಗೂ ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಹಾಗೂ ಸಾರಿಗೆ ನಿಗಮಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

Related Articles

Comments (0)

Leave a Comment