ಪತ್ನಿಯೊಂದಿಗಿದ್ದ ಮಗು ಹಾಜರುಪಡಿಸಲು ಕೋರಿ ಪತಿಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ; 25 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಪತ್ನಿ ಕರೆದೊಯ್ದಿರುವ ಮಗುವನ್ನು ಹಾಜರುಪಡಿಸಲು ಕೋರಿ ಪತಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರು ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ 25 ಸಾವಿರ ರೂ. ದಂಡ ವಿಧಿಸಿದೆ.

ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಹಾಗೂ ನ್ಯಾಯಮೂರ್ತಿ ಪಿ. ಶ್ರೀಸುಧಾ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಎತ್ತಿರುವ ವಿಚಾರ ಸಂಪೂರ್ಣವಾಗಿ ವೈವಾಹಿಕ ವಿವಾದಕ್ಕೆ ಸಂಬಂಧಿಸಿದ್ದು, ಮಗುವನ್ನು ಹಾಜರುಪಡಿಸಲು ಆದೇಶಿಸಬೇಕು ಎಂದು ಹೇಬಿಯಸ್‌ ಕಾರ್ಪಸ್‌ ಅರ್ಜಿ ಮೂಲಕ ಕೋರಲಾಗದು. ಇದು ಕಾನೂನು ಪ್ರಕ್ರಿಯೆ ದುರ್ಬಳಕೆಯಲ್ಲದೇ ಬೇರೇನೂ ಅಲ್ಲ. ಸೂಕ್ತ ಪರಿಹಾರ ಕೋರುವುದಕ್ಕೆ ಬದಲಾಗಿ ಪತಿಯು ಮಗುವನ್ನು ಹಾಜರುಪಡಿಸಲು ಕೋರಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತಲ್ಲದೆ, ಅರ್ಜಿದಾರ ಪತಿಗೆ 25 ಸಾವಿರ ರೂ. ದಂಡ ವಿಧಿಸಿತು.

ಜತೆಗೆ, ಅರ್ಜಿದಾರರು ದಂಡದ ಮೊತ್ತವನ್ನು ಒಂದು ವಾರದಲ್ಲಿ ಹೈಕೋರ್ಟ್‌ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು, ಇಲ್ಲವಾದಲ್ಲಿ ರಿಜಿಸ್ಟ್ರಿಯು ಕಾನೂನಿನ ಪ್ರಕಾರ ದಂಡ ವಸೂಲಿ ಮಾಡಬಹುದು ಎಂದು ನ್ಯಾಯಪೀಠ ಆದೇಶಿಸಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಪತಿಯ ಪರ ವಕೀಲರು ವಾದ ಮಂಡಿಸಿ, ಇದು ವೈವಾಹಿಕ ವಿವಾದವಲ್ಲ. ಪತ್ನಿಯು ಮಗುವನ್ನು ಕರೆದೊಯ್ದಿದ್ದು, ಇಲ್ಲಿ ಮಗುವಿನ ಸುರಕ್ಷತೆ ಮಹತ್ವದ್ದಾಗಿದೆ ಎಂದರು.

ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಇದು ದಂಪತಿಯ ನಡುವಿನ ವಿಚಾರವಾಗಿದ್ದು, ತಾಯಿಯ ಜತೆ ಮಗು ಇದೆ. ಪ್ರತಿದಿನ ಇವರು ವಿಡಿಯೊ ಕಾಲ್‌ನಲ್ಲಿ ಮಾತನಾಡುತ್ತಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಈ ಹಂತದಲ್ಲಿ ಅರ್ಜಿಯ ಊರ್ಜಿತತ್ವ ಪ್ರಶ್ನಿಸಿದ ನ್ಯಾಯಪೀಠ, ಈ ವಿಚಾರದಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹೇಗೆ ಸಲ್ಲಿಸಿದ್ದೀರಿ? ಗಂಡ-ಹೆಂಡತಿಯರ ನಡುವಿನ ವಿಚಾರ ಇದಾಗಿದ್ದು, ಪತ್ನಿ ಮಗು ಕರೆದೊಯ್ದಿದ್ದಾರೆ. ಹೀಗಿರುವಾಗ, ಹೇಬಿಯಸ್‌ ಕಾರ್ಪಸ್‌ ಊರ್ಜಿತವಾಗುತ್ತದೆಯೇ ಎಂದು ಪ್ರಶ್ನಿಸಿತು. ಅಂತಿಮವಾಗಿ, ಪತಿಗೆ 25 ಸಾವಿರ ರೂ. ದಂಡ ವಿಧಿಸಿ, ಅರ್ಜಿ ವಜಾಗೊಳಿಸಿತು.

Related Articles

Comments (0)

Leave a Comment