ಸಿಇಟಿ ಪರೀಕ್ಷಾ‌ ಕೇಂದ್ರದಲ್ಲಿ ಜನಿವಾರ ತೆಗೆಸಿದ ಪ್ರಕರಣದಲ್ಲಿ ಡಿಸಿಗಳಿಂದ ವರದಿ ನೀರಿಕ್ಷಿಸಲಾಗಿದೆ; ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಸಂಬಂಧ ವರದಿಯಾಗಿರುವ ಪ್ರಕರಣ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನಿಖೆಗೆ ಆದೇಶಿಸಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ನಿರೀಕ್ಷಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಇದೇ ಮೇ 3ರಂದು ನೀಟ್‌ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೆಲ ನಿರ್ದೇಶನಗಳನ್ನು ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪರ ಹಿರಿಯ ವಕೀಲ ಎಸ್‌. ಶ್ರೀರಂಗ ಮನವಿ ಮಾಡಿದರು.

ಕಳೆದ ವರ್ಷವೂ ಇದೇ ರೀತಿ ಸಿಇಟಿ ಪರೀಕ್ಷೆ ಸೇರಿದಂತೆ ಬೇರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಲಾಗಿತ್ತು. ಅದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು. ಆಗ ರಾಜ್ಯ ಸರ್ಕಾರ ಈ ಘಟನೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂಧು ಭರವಸೆ ನೀಡಿತ್ತು. ಅದಾಗ್ಯೂ, ಈ ವರ್ಷವೂ ಅದೇ ಕೃತ್ಯ ಮರುಳಿಸಿರುವುದನ್ನು ಉಲ್ಲೇಖಿಸಿದ್ದು, ವಿಚಾರಣೆ ನಡೆಸಬೇಕು ಎಂದು ಕೋರಿದರು.

ಕೆಇಎ ಪರ ಹಿರಿಯ ವಕೀಲ ಎನ್‌.ಕೆ. ರಮೇಶ್‌ ಅವರು, ಏಪ್ರಿಲ್‌ 23 ಹಾಗೂ 24ರಂದು ಸಿಇಟಿ ಪರೀಕ್ಷೆ ನಡೆದ 700ಕ್ಕೂ ಅಧಿಕ ಕೇಂದ್ರಗಳ ಪೈಕಿ ಎರಡರಲ್ಲಿ ಘಟನೆಯ ವರದಿಯಾಗಿದೆ. ಈ ಸಂಬಂಧ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅದಾಗ್ಯೂ ಇಂಥ ಘಟನೆ ಸಂಭವಿಸಿದೆ. ಈ ಕುರಿತು ಸಂಬಂಧಿತ ಜಿಲ್ಲಾಧಿಕಾರಿಗಳಿಂದ ತನಿಖಾ ವರದಿ ನಿರೀಕ್ಷಿಸಲಾಗಿದೆ ಎಂದರು.

ಈ ಹಂತದಲ್ಲಿ ನ್ಯಾಯಪೀಠ, ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಬೇಕಿತ್ತು ಎಂದು ಹೇಳಿತು. ಆಗ ಶ್ರೀರಂಗ ಅವರು ಮೇ 3ಕ್ಕೆ ನೀಟ್ ಪರೀಕ್ಷೆ ನಿಗದಿಯಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ನೀಡಿರುವ ಭರವಸೆಯು ಚಾಲ್ತಿಗೆ ಬಾರದೇ ಇರುವುದರಿಂದ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದರು.

ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು, ಯಾವುದೇ ಬಾದಿತ ವಿದ್ಯಾರ್ಥಿಯು ಬ್ರಾಹ್ಮಣ ಮಹಾಸಭಾ ಅನ್ನು ಸಂಪರ್ಕಿಸಿಲ್ಲ ಎಂದರು. ಎಲ್ಲರ ವಾದ ಆಲಿಸಿದ ನ್ಯಾಯಪೀಠ ಯಾವುದೇ ಆದೇಶ ಮಾಡದೆ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment