ಲ್ಯಾಂಬೊರ್ಗಿನಿ ಕಾರ್‌ಗೆ ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಅಳವಡಿಸಿದ ಆರೋಪ; ರಿಕ್ಕಿ ರೈ ವಿರುದ್ಧ ಆತುರದ ಕ್ರಮ ಬೇಡವೆಂದ ಹೈಕೋರ್ಟ್‌

ಬೆಂಗಳೂರು: ಐಷಾರಾಮಿ ಲ್ಯಾಂಬೊರ್ಗಿನಿ ಹುರಕಾನ್‌ ಕಾರ್‌ಗೆ ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಅಳವಡಿಸಿದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ದ ಆತುರ ಕ್ರಮಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಎಫ್‌ಐಆರ್‌ ರದ್ದು ಕೋರಿ ರಿಕ್ಕಿ ರೈ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಐಯಂಗಾರ್‌, ಸಾರಿಗೆ ಪ್ರಾಧಿಕಾರ ಫ್ಯಾನ್ಸಿ ನಂಬರ್‌ ನೀಡಿರುವುದು ಮತ್ತು ಅದಕ್ಕೆ ರಿಕ್ಕಿ ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲೆ ಇದೆ. ಆದ್ದರಿಂದ, ನಕಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಹಾಕಲಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಫ್ಯಾನ್ಸಿ ನಂಬರ್‌ಗೆ ಅರ್ಜಿದಾರರು 4 ಲಕ್ಷ ರೂ. ಪಾವತಿಸಿದ್ದಾರೆ. ಅರ್ಜಿದಾರರಿಗೆ ಅನ್ವಯಿಸಿರುವ ಸೆಕ್ಷನ್‌ಗಳು ಊರ್ಜಿತವಾಗದು ಎಂದರು.

ಮುಂದುವರಿದು, ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಸದ್ದು ಮಾಡಿ ಹೋಗುತ್ತಿರುವಾಗ ಕಿರಿಕಿರಿಗೆ ಒಳಗಾದ ವ್ಯಕ್ತಿಯೊಬ್ಬರು ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ. ಮೋಟಾರು ವಾಹನ (ಎಂವಿ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹೋಗಿ ಅವರು ದಂಡ ಕಟ್ಟಲಿದ್ದಾರೆ. ಹೀಗಿರುವಾಗ, ಎರಡನೇ ಎಫ್‌ಐಆರ್‌ ದಾಖಲಿಸುವ ಅವಶ್ಯಕತೆ ಏನಿತ್ತು ಎಂದು ಆಕ್ಷೇಪಿಸಿದರು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ವಾದ ಮಂಡಿಸಿ, ಪ್ರಶ್ನಾರ್ಹ ಫ್ಯಾನ್ಸಿ ನಂಬರ್‌ ಅನ್ನು ಅರ್ಜಿದಾರರು ಖರೀದಿಸಿರುವ ವಾಹನಕ್ಕೆ ಅಧಿಕೃತವಾಗಿ ಹಂಚಿಕೆ ಮಾಡಲಾಗಿಲ್ಲ. ದೆಹಲಿಯಲ್ಲಿ ವಾಹನ ಖರೀದಿಸಿದ ಬಳಿಕ ಪುನಃ ನೋಂದಣಿ ಪ್ರಕ್ರಿಯೆಯನ್ನು ರಿಕ್ಕಿ ಬೆಂಗಳೂರಿನಲ್ಲಿ ಮಾಡಿಲ್ಲ. ಇಂಥ ನಂಬರ್‌ ಪ್ಲೇಟ್‌ಗಳ ಬಳಕೆಯು ವಂಚನೆ ಮತ್ತು ದಾಖಲೆ ತಿರುಚಿದ ಆರೋಪದ ಪ್ರಕರಣವಾಗುತ್ತದೆ ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿಗೆ ಒಳಪಟ್ಟು ತನಿಖೆಯ ನೆಪದಲ್ಲಿ ಪೊಲೀಸರು ಅವರ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿತಲ್ಲದೆ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ಪ್ರಕರಣವೇನು?
ಬೆಂಗಳೂರಿನ ಅನಿಲ್‌ ಕುಂಬ್ಳೆ ವೃತ್ತದ ಬಳಿ 2026ರ ಮಾರ್ಚ್‌ 21ರ ಮಧ್ಯರಾತ್ರಿ 2.40ರ ವೇಳೆಗೆ KA-05 NR 0009 ಸಂಖ್ಯೆಯ ಲ್ಯಾಂಬೊರ್ಗಿನಿ ಕಾರನ್ನು ಶರವೇಗದಲ್ಲಿ ಓಡಿಸಿದ್ದ ವಿಡಿಯೊವನ್ನು ವ್ಯಕ್ತಿಯೊಬ್ಬರು ನಗರ ಪೊಲೀಸರಿಗೆ ಟ್ಯಾಗ್‌ ಮಾಡಿದ್ದರು. ಇದರ ಅನ್ವಯ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನವನ್ನು ಜಪ್ತಿ ಮಾಡಲಾಗಿತ್ತು.

ಆನಂತರ, ತನಿಖೆ ಆರಂಭಿಸಿದ್ದ ಪೊಲೀಸರು ಆರ್‌ಟಿಒ ಕಚೇರಿಯಲ್ಲಿ ವಾಹನದ ಸಂಖ್ಯೆಯ ಪೂರ್ವಾಪರ ವಿಚಾರಿಸಿದ್ದರು. ಈ ಸಂಖ್ಯೆಯನ್ನು ಯಾರಿಗೂ ಹಂಚಿಕೆ ಮಾಡಲಾಗಿಲ್ಲ ಎಂಬ ಉತ್ತರವನ್ನು ಆರ್‌ಟಿಒ ಅಧಿಕಾರಿಗಳು ನೀಡಿದ್ದರು.  ಈ ನಡುವೆ, ರಿಕ್ಕಿ ರೈ ಅವರು ದೆಹಲಿಯ ವ್ಯಕ್ತಿಯೊಬ್ಬರಿಂದ ಕಾರು ಖರೀದಿಸಿದ್ದು, ಇಲ್ಲಿನ ಕಾನೂನಿನ ಅನ್ವಯ ಅದರ ಮರುನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿರಲಿಲ್ಲ. ಇದಕ್ಕೆ ಬದಲಾಗಿ ನಕಲಿ ನಂಬರ್‌ ಪ್ಲೇಟ್‌ ಹಾಕಿಕೊಂಡಿದ್ದರು. ಈ ಆಧಾರದ ಹಿನ್ನೆಲೆಯಲ್ಲಿ ಕಬ್ಬನ್‌‌ಪಾರ್ಕ್‌ ಸಂಚಾರ ಠಾಣೆ ಪೊಲೀಸರು ರಿಕ್ಕಿ ರೈ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 318(4) (ವಂಚನೆ), 340(2) (ನಕಲಿ ದಾಖಲೆ ತಿರುಚಿ ಅಸಲಿ ಎಂದು ಬಿಂಬಿಸುವುದು) ಮತ್ತು 341ರ (ನಕಲಿ ದಾಖಲೆ ಸೃಷ್ಟಿಸಲು ಸಾಧನ ಸಂಗ್ರಹ) ಅಡಿ ಪ್ರಕರಣ ದಾಖಲಿಸಿದ್ದಾರೆ.

Related Articles

Comments (0)

Leave a Comment