ಅಬಕಾರಿ ಪರವಾನಗಿಗಳ ಇ-ಹರಾಜು ಪ್ರಕ್ರಿಯೆ; ಏಕಸದಸ್ಯ ಪೀಠದ ತಡೆ ತೆರವುಗೊಳಿಸಿದ ವಿಭಾಗೀಯ ನ್ಯಾಯಪೀಠ
- by Jagan Ramesh
- April 17, 2026
- 7 Views
ಬೆಂಗಳೂರು: ನವೀಕರಣಗೊಳ್ಳದ, ರದ್ದುಗೊಂಡ ಹಾಗೂ ಮುಟ್ಟುಗೋಲು ಹಾಕಿಕೊಂಡ ಅಬಕಾರಿ ಪರವಾನಗಿಗಳನ್ನು ನಿಗದಿತ ಮೀಸಲಾತಿಗೆ ಅನುಗುಣವಾಗಿ ಇ-ಹರಾಜು ನಡೆಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ, ಕಳೆದ ನವೆಂಬರ್ನಿಂದ ಸ್ಥಗಿತಗೊಂಡಿದ್ದ 569ಕ್ಕೂ ಅಧಿಕ ಪರವಾನಗಿಗಳ ಇ-ಹರಾಜು ಪ್ರಕ್ರಿಯೆಯ ಹಾದಿ ಸುಗಮವಾಗಿದೆ.
ಇ-ಹರಾಜು ಪ್ರಕ್ರಿಯೆಗೆ ಕಳೆದ ನವೆಂಬರ್ 2025ರಂದು ಏಕಸದಸ್ಯ ನ್ಯಾಯಪೀಠ ತಡೆ ನೀಡಿದ್ದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಆದೇಶ ಮೇಲ್ನೋಟಕ್ಕೆ ಮುಖ್ಯವಾಗಿ, ನಿಯಮಬಾಹಿರವಾಗಿವೆ ಎಂಬುದಾಗಿದ್ದು, ಅದರ ಪರೀಲನೆ ಅಗತ್ಯವಿದೆ ಎಂದು ಹೇಳಲಾಗಿದೆ. ಶಾಸನದ ಅಮಾನ್ಯತೆಗೆ ಬಲವಾದ ಕಾರಣ ನೀಡದ ಹೊರತು, ಅದರ ಕಾರ್ಯಾಚರಣೆಗಳಿಗೆ ತಡೆಯಾಜ್ಞೆ ನೀಡಲಾಗುವುದಿಲ್ಲ ಎಂದು ಹೇಳಿದೆ.
ಅಬಕಾರಿ ಪರವಾನಗಿದಾರರಾಗಿರುವ ಅರ್ಜಿದಾರರು (ಮೂಲ ರಿಟ್ ಅರ್ಜಿದಾರರು) 2025ರಲ್ಲಿ ಎರಡನೇ ತಿದ್ದುಪಡಿಯ ಮೂಲಕ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968ರ ನಿಯಮ 5, 5-ಎ ಮತ್ತು 12ಕ್ಕೆ ತರಲಾದ ತಿದ್ದುಪಡಿಗಳನ್ನು ಏಕಸದಸ್ಯ ನ್ಯಾಯಪೀಠದ ಮುಂದೆ ಪ್ರಶ್ನಿಸಿದ್ದಾರೆ. ತಿದ್ದುಪಡಿ ಮಾಡಿದ ನಿಯಮಗಳು 5 ಮತ್ತು 5-ಎಗಳ ಕಾರ್ಯಾಚರಣೆ, ಅನುಷ್ಠಾನ ಮತ್ತು ಜಾರಿಗೆ ಏಕಸದಸ್ಯ ನ್ಯಾಯಪೀಠ ತಡೆ ನೀಡಿತ್ತು. ಅದು ಮಧ್ಯಂತರ ಆದೇಶವಾಗಿದ್ದರೂ, ನಂತರ ಅದನ್ನು ವಿಸ್ತರಣೆ ಮಾಡಲಾಗಿದೆ. ಆಕ್ಷೇಪಾರ್ಹ ನಿಯಮಗಳು ಮೇಲ್ನೋಟಕ್ಕೆ ಅಮಾನ್ಯವಾಗಿವೆ ಎಂಬ ಏಕಸದಸ್ಯ ನ್ಯಾಯಪೀಠದ ನಿಲುವನ್ನು ಒಪ್ಪಲಾಗದು. ಅರ್ಜಿದಾರರು ಆಕ್ಷೇಪಾರ್ಹ ನಿಯಮಗಳಿಗೆ ತಡೆ ಪಡೆಯಲು ನಿಯಮಗಳನ್ನು ಬಾಹಿರವೆಂದು ಕರೆದಿದ್ದಾರೆ ಎಂದು ವಿಭಾಗೀಯ ನ್ಯಾಯಪೀಠ ಹೇಳಿದೆ.
ಮೇಲ್ನೋಟಕ್ಕೆ ನಾವು ನಿಯಮಾವಳಿ ಕಾನೂನುಬಾಹಿರವೆಂದು ಒಪ್ಪಲು ಸಾಧ್ಯವಿಲ್ಲ ಮತ್ತು ಆ ನಿಯಮಗಳನ್ನು ರದ್ದುಗೊಳಿಸಲಾಗದು. ಅರ್ಜಿದಾರರು ಸಿಎಲ್-2ಎ ನಿಯಮ ಏಕಪಕ್ಷೀಯವೆಂದು ಹೇಳಿದರೂ, ಈ ಹಂತದಲ್ಲಿ ಅದನ್ನು ಪರಿಗಣಿಸುವ ಅಗತ್ಯವಿಲ್ಲ. ಹಲವು ಕಾರಣಗಳಿಂದಾಗಿ ಈ ಹಂತದಲ್ಲಿ ಆ ಪ್ರಶ್ನೆಯ ಬಗ್ಗೆ ಪರಿಶೀಲನೆಗೆ ನ್ಯಾಯಾಲಯ ಮುಂದಾಗುವುದಿಲ್ಲವೆಂದು ತಿಳಿಸಿದೆ.
ಸರ್ಕಾರದ ಪರ ವಕೀಲರು, ನವೀಕರಣಗೊಳ್ಳದೆ ರದ್ದಾಗಿರುವ ಲೈಸೆನ್ಸ್ಗಳನ್ನು ಮಾತ್ರ ಹರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ, ಉದ್ದೇಶಿತ ನಿಯಮದ ನಿಬಂಧನೆ 12ರ ಸಿಂಧುತ್ವವನ್ನು ಏಕಸದಸ್ಯ ನ್ಯಾಯಪೀಠದ ಮುಂದೆ ಬಗೆಹರಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಆದ್ದರಿಂದ, ನಿಯಮಗಳ ಜಾರಿಗೆ ಮಧ್ಯಂತರ ತಡೆ ಅನಗತ್ಯವೆಂದಿರುವ ವಿಭಾಗೀಯ ನ್ಯಾಯಪೀಠ, ಸರ್ಕಾರದ ಮೇಲ್ಮನವಿ ಪುರಸ್ಕರಿಸಿ, ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ರದ್ದುಗೊಳಿಸಿದೆ.
ಪ್ರಕರಣವೇನು?
ಹೆಚ್ಚುವರಿ ಅಬಕಾರಿ ಆದಾಯ ಸಂಗ್ರಹಿಸುವ ಸಲುವಾಗಿ ಸರ್ಕಾರ 2025-2026ನೇ ಸಾಲಿನ ಬಜೆಟ್ನಲ್ಲಿ ಅಬಕಾರಿ ಪರವಾನಗಿಗಳಿಗೆ ಇ-ಹರಾಜು ಪರಿಚಯಿಸುವುದಾಗಿ ಘೋಷಿಸಿತ್ತು. ಅದರಂತೆ, ಇಲಾಖೆ ಹಿಂದೆ ನವೀಕರಣವಾಗದ ಅಥವಾ ಲ್ಯಾಪ್ಸ್ ಆದ ಸುಮಾರು 500 ಅಬಕಾರಿ ಸನ್ನದುಗಳನ್ನು ಪಟ್ಟಿ ಮಾಡಿ ಅವುಗಳನ್ನು ಹರಾಜು ಮಾಡಲು ಸಿದ್ಧತೆ ನಡೆಸಿತ್ತು. ಅದಕ್ಕೆ ಅನುಕೂಲವಾಗುವಂತೆ ಕಳೆದ ನವೆಂಬರ್ನಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಕರಡು ಪ್ರಕಟಿಸಿತ್ತು. ಆನಂತರ, ಅದನ್ನು ಅಂತಿಮಗೊಳಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಶಾಂತಾಬಾಯಿ, ಮೈಸೂರಿನ ಎಸ್. ಗುರುಸ್ವಾಮಿ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2025ರ ನವೆಂಬರ್ 25ರಂದು ಇ-ಹರಾಜಿಗೆ ತಡೆ ನೀಡಿತ್ತು.
Related Articles
Thank you for your comment. It is awaiting moderation.



Comments (0)