ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ನಿಷೇಧ ಕೋರಿದ ಪಿಐಎಲ್; ವಿವರವಾದ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಗೆ ನಿಷೇಧ ಹೇರಲು ನಿರಾಕರಿಸಿರುವ ಹೈಕೋರ್ಟ್, ಅರಣ್ಯದ ಯಾವ ವಲಯದಲ್ಲಿ ಸಫಾರಿಗೆ ಅವಕಾಶ ನೀಡಲಾಗಿದೆ ಎಂಬ ಕುರಿತು ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ರಾಜ್ಯದ ಸೂಕ್ಷ್ಮ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಶಾಶ್ವತವಾಗಿ ನಿಷೇಧಿಸಲು‌ ನಿರ್ದೇಶನ ಕೋರಿ ಮೈಸೂರಿನ ವಿ. ರವಿಕುಮಾರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ, ಶೇ.50 ರಷ್ಟು ಸಫಾರಿಗೆ ಅವಕಾಶ ನೀಡಿ ಅರಣ್ಯ ಇಲಾಖೆ 2026ರ ಫೆಬ್ರವರಿ 21ರಂದು ಹೊರಡಿಸಿರುವ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು.

ಜತೆಗೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸೋದ್ಯಮ ವಲಯ, ಕೋರ್ ಹಾಗೂ ಬಫರ್ ವಲಯಗಳೆಂಬ ಮೂರು ವಲಯಗಳಿರುತ್ತವೆ. ಇವುಗಳ ಪೈಕಿ ಯಾವ ವಲಯದಲ್ಲಿ ಸಫಾರಿಗೆ ಅವಕಾಶ‌ ನೀಡಲಾಗುತ್ತದೆ ಎಂಬ ಬಗ್ಗೆ ನಿಖರವಾದ ಸ್ಥಳಗಳು ಮತ್ತು ಈ ವಲಯಗಳನ್ನು ಸೂಚಿಸುವ ನಕ್ಷೆಗಳನ್ನು ಸ್ಪಷ್ಟಪಡಿಸುವ ವಿವರವಾದ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಸಫಾರಿ ನಿಷೇಧಿಸಲ್ಪಟ್ಟಿರುವ, ಹುಲಿಗಳು ನೆಲೆಸಿರುವ ಪ್ರಮುಖ ಸ್ಥಳಗಳಲ್ಲಿ ಸಫಾರಿ ನಡೆಸಲಾಗುತ್ತಿದೆ. ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿ ಹೊಂದಿರುವವರ ಒತ್ತಡಕ್ಕೆ ಮಣಿದು ಸಫಾರಿ ಮತ್ತ ಆರಂಭಿಸಲಾಗಿದೆ. ಸಫಾರಿ ಚಟುವಟಿಕೆ ಮುಂದುವರಿಸುವುದರಿಂದ ಮಾನವ-ವನ್ಯಜೀವಿಗಳ ಸಂಘರ್ಷ ವ್ಯಾಪಕವಾಗಲಿದೆ ಎಂದರು.

ಈ ಹಂತದಲ್ಲಿ ನ್ಯಾಯಪೀಠ, ನಿರ್ಣಾಯಕ ಹುಲಿ ಆವಾಸಸ್ಥಾನವು ಯಾವಾಗಲೂ ಕೋರ್ ವಲಯಕ್ಕೆ ಸಮಾನಾರ್ಥಕವಲ್ಲ ಮತ್ತು ಸರಿಯಾದ ವರ್ಗೀಕರಣವನ್ನು ಪರಿಶೀಲಿಸಬೇಕು. ಹುಲಿ ಸಂರಕ್ಷಿತ ಪ್ರದೇಶಗಳು ಸಾಮಾನ್ಯವಾಗಿ ಕೋರ್, ಬಫರ್ ಮತ್ತು ಪ್ರವಾಸೋದ್ಯಮ ವಲಯಗಳನ್ನು ಒಳಗೊಂಡಿರುತ್ತವೆ. ಸಫಾರಿಯನ್ನು ಸಾಮಾನ್ಯವಾಗಿ ಬಫರ್ ಅಥವಾ ಗೊತ್ತುಪಡಿಸಿದ ಪ್ರವಾಸೋದ್ಯಮ ವಲಯಗಳಲ್ಲಿ ಮಾತ್ರ ಅನುಮತಿಸಲಾಗುತ್ತದೆ, ಕಟ್ಟುನಿಟ್ಟಾಗಿ ಸಂರಕ್ಷಿತ ಕೋರ್ ಪ್ರದೇಶಗಳಲ್ಲಿ ಅಲ್ಲ ಎಂದು ಹೇಳಿತು.

ಮುಂದುವರಿದು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಬಫರ್ ವಲಯಗಳೊಳಗಿನ ಅರಣ್ಯೇತರ ಅಥವಾ ಅವನತಿ ಹೊಂದಿದ ಭೂಮಿಯಲ್ಲಿ ಸಫಾರಿಗಳನ್ನು ನಡೆಸಬೇಕು, ನಿರ್ಣಾಯಕ ಆವಾಸಸ್ಥಾನಗಳು ಮತ್ತು ಹುಲಿ ಕಾರಿಡಾರ್‌ಗಳನ್ನು ತಪ್ಪಿಸಬೇಕು ಎಂದು ನ್ಯಾಯಪೀಠ ಹೇಳಿತು.

ಪ್ರಕರಣವೇನು?
ಕಳೆದ ವರ್ಷದ ಅಕ್ಟೋಬರ್-ನವೆಂಬರ್​ನಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ವ್ಯಾಪಕವಾಗಿ, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಿಂದ, ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮೂರು ತಿಂಗಳಿಗೂ ಅಧಿಕ ಕಾಲ ಸಫಾರಿಗೆ ನಿಷೇಧ ಹೇರಿತ್ತು. ಆದರೆ, ಫೆಬ್ರವರಿಯಲ್ಲಿ ತಾಂತ್ರಿಕ ಸಮಿತಿಯ ಶಿಫಾರಸುಗಳು ಆಧಾರದ ಮೇಲೆ ಶೇ. 50ರಷ್ಟು ಸಫಾರಿಗೆ ಅನುಮತಿಸಿ ಅರಣ್ಯ ಇಲಾಖೆ ಫೆಬ್ರವರಿ 21ರಂದು ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಸಫಾರಿ ಚಟುವಟಿಕೆ ಸ್ಥಾಪಿತ ಸಂರಕ್ಷಣಾ ಮಾನದಂಡಗಳನ್ನು ಉಲ್ಲಂಘಿಸುವುದರಿಂದ ಪ್ರಮುಖ ಹುಲಿ ಆವಾಸ ಸ್ಥಾನಗಳಲ್ಲಿ ಹುಲಿ ಸಫಾರಿಗಳನ್ನು ಶಾಶ್ವತವಾಗಿ ನಿಷೇಧಿಸಬೇಕು. ಭಾರತದಲ್ಲಿ ಅರಣ್ಯ ರಕ್ಷಣೆ ಮತ್ತು ವನ್ಯಜೀವಿ ನಿರ್ವಹಣೆಗೆ ಸಂಬಂಧಿಸಿದ ಟಿ.ಎನ್. ಗೋದವರ್ಮನ್ ತಿರುಮುಲ್ಪಾಡ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಪಾಲಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Articles

Comments (0)

Leave a Comment