ಎಚ್‌ಡಿಕೆ-ಚಂದ್ರಶೇಖರ್ ಪ್ರಕರಣ; ಮಧ್ಯಸ್ಥಿಕೆಗೆ ನಿವೃತ್ತ ನ್ಯಾ. ಎ.ಎಸ್. ಓಕ್ ಹೆಸರು ಪ್ರಸ್ತಾಪಿಸಿದ ಹೈಕೋರ್ಟ್

ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್‌ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆದರಿಕೆಯೊಡ್ಡಿದ ಆರೋಪ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.‌ ಓಕ್ ಅವರ ಹೆಸರನ್ನು ಹೈಕೋರ್ಟ್ ಪ್ರಸ್ತಾಪಿಸಿದೆ.

ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ನಗರದ 42ನೇ ಎಸಿಎಂಎಂ ನ್ಯಾಯಾಲಯದ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ವಿಚಾರಣೆ ರದ್ದು ಕೋರಿ ಎಚ್.ಡಿ. ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ವಿಚಾರಣೆಗೆ ಕುಮಾರಸ್ವಾಮಿ ಮತ್ತು ಚಂದ್ರಶೇಖರ್‌ ಅವರ ಪರ ವಕೀಲರು ಹಾಜರಾಗಿದ್ದರು.

ಈ ವೇಳೆ ನ್ಯಾಯಪೀಠ, ಅರ್ಜಿದಾರರು ಹಾಗೂ ದೂರುದಾರರರ ನಡುವಿನ ಪ್ರಕರಣವನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್.‌ ಓಕ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಕ ಮಾಡಲು ಉದ್ದೇಶಿಸಲಾಗಿದೆ. ಉಭಯ ಪಕ್ಷಕಾರರಿಗೆ ಒಪ್ಪಿಗೆಯಾದರೆ ತಿಳಿಸಿ, ನ್ಯಾಯಮೂರ್ತಿ ಓಕ್ ಅವರನ್ನು ಮಧ್ಯಸ್ಥಿಕೆದಾರರನ್ನು ನೇಮಕ ಮಾಡಲಾಗುವುದು.‌ ಒಂದೊಮ್ಮೆ ಬೇರೊಬ್ಬರನ್ನು ನೇಮಿಸಲು ನೀವು (ಎಚ್‌ಡಿಕೆ ಹಾಗೂ ಚಂದ್ರಶೇಖರ್‌) ಬಯಸಿದರೆ, ಅವರ ಹೆಸರನ್ನೂ ಸೂಚಿಸಬಹುದು ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment