ಧರ್ಮಸ್ಥಳ ಅಸಹಜ ಸಾವುಗಳ ತನಿಖೆ ಕುರಿತು ಸುಳ್ಳು ಮಾಹಿತಿ ಪ್ರಸಾರ; ಯೂಟ್ಯೂಬರ್ ಸಮೀರ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
- by LegalSamachar
- April 1, 2026
- 8 Views
ಬೆಂಗಳೂರು: ಧರ್ಮಸ್ಥಳದಲ್ಲಿ ಸಂಭವಿಸಿವೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ಸಂಬಂಧಿಸಿದಂತೆ ಕಾಲ್ಪನಿಕ ವಿಚಾರಗಳನ್ನು ಆಧರಿಸಿ, ಕೃತಕ ಬುದ್ದಿಮತ್ತೆ (ಎಐ) ನೆರವಿನಿಂದ ವಿಡಿಯೊ ಮಾಡಿ ಹರಿಬಿಟ್ಟ ಆರೋಪದಲ್ಲಿ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಎಂ.ಡಿ. ಸಮೀರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ತಡೆ ನೀಡಿತಲ್ಲದೆ, ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಸಮೀರ್ ಪರ ವಕೀಲೆ ಕೆ. ಅಕ್ಷತಾ ಶೆಟ್ಟಿ ವಾದ ಮಂಡಿಸಿ, ಯೂಟ್ಯೂಬ್ ಚಾನಲ್ ತೆರೆದು ನೋಡಿದಾಗ, ಸಮೀರ್ ವಿಡಿಯೊ ಬಂದಿತ್ತು. ಸುಳ್ಳುಗಳನ್ನು ಬಿತ್ತರಿಸಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕರ ನೆಮ್ಮದಿಗೆ ಹಾಳು ಮಾಡಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ ಎಂದರು.
ಆಗ ನ್ಯಾಯಪೀಠ, (ಸಮೀರ್‌ಗೆ) ಸುಮ್ಮನೆ ಇರಲು ಆಗುವುದಿಲ್ಲವೇ? ಸುಮ್ಮನೆ ಇರಲು ಏಕೆ ಆಗಲ್ಲ? ನೀವು ಯಾರ ನೆಮ್ಮದಿ ಹಾಳು ಮಾಡಿದ್ದೀರಿ ಎಂದು ಗೊತ್ತಿದೆ. ಸಾರ್ವಜನಿಕರ ನೆಮ್ಮದಿಯಂತೂ ಅಲ್ಲ. ಅವರದು ಯಾಕೆ? ಅವರ ನೆಮ್ಮದಿ, ನೆಮ್ಮದಿಯಲ್ಲವೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿತು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕಿ ಆಸ್ಮಾ ಕೌಸರ್, ಸಮೀರ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣವಲ್ಲ. ಧರ್ಮಸ್ಥಳ ಪ್ರಕರಣದ ತನಿಖೆಗೆ ಸಂಬಂಧಿಸಿದ್ದಾಗಿದೆ. ಸಾಕ್ಷಿ ದೂರುದಾರನನ್ನು ಸಂರಕ್ಷಿಸಿದ್ದ ಪ್ರಕರಣ ಇದಾಗಿದ್ದು, ಅದಾಗ್ಯೂ ಕೃತಕ ಬುದ್ದಿಮತ್ತೆ ನೆರವಿನಿಂದ ಸಮೀರ್ ವಿಡಿಯೊ ಮಾಡಿದ್ದಾರೆ. ಕೆಲವು ಶವಗಳನ್ನು ಅಲ್ಲಿ ಹೂಳಲಾಗಿದ್ದು, ಕೆಲವನ್ನು ಅಲ್ಲಿ ಸಂಸ್ಕಾರ ಮಾಡಲಾಗಿದೆ ಎಂದು ವಿಡಿಯೊದಲ್ಲಿ ತೋರಿಸಲಾಗಿದೆ. ಸಮೀರ್ ವಿರುದ್ಧ 5 ಪ್ರಕರಣ ದಾಖಲಾಗಿವೆ. ತನಿಖೆ ನಡೆದರೆ ಸತ್ಯ ಹೊರಬರಲಿದೆ. ಇದೇ ಮೊದಲ ಬಾರಿಗೆ ಸಮೀರ್ ಈ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸಿ, ದ್ವೇಷದ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದರು.
Related Articles
Thank you for your comment. It is awaiting moderation.



Comments (0)