ಗ್ರಾ.ಪಂ. ಚುನಾವಣೆ; ಸದಸ್ಯರ ಸಂಖ್ಯೆ ಗುರುತಿಸಲು 4 ವಾರ ಕಾಲಾವಕಾಶ ಕೇಳಿದ ಸರ್ಕಾರ
- by Prashanth Basavapatna
- March 23, 2026
- 5 Views
ಬೆಂಗಳೂರು: ರಾಜ್ಯದಲ್ಲಿ 5,950 ಗ್ರಾಮ ಪಂಚಾಯಿತಿಗಳಿದ್ದು, ಪ್ರಸ್ತುತ 96 ಸಾವಿರಕ್ಕೂ ಅಧಿಕ ಸದಸ್ಯರ ಸಂಖ್ಯೆ ಇದೆ. ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು 4 ವಾರಗಳ ಅಗತ್ಯವಿದೆ ಎಂದು ಲಿಖಿತವಾಗಿ ಕಾಲಾವಕಾಶ ಕೇಳಿರುವ ರಾಜ್ಯ ಸರ್ಕಾರ, ಆನಂತರ ಮೀಸಲಾತಿ ಪ್ರಕ್ರಿಯೆ ಅಂತಿಮಗೊಳಿಸಿ, ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಕನಿಷ್ಟ 3 ತಿಂಗಳು ಕಾಲಾವಕಾಶ ಬೇಕು ಎಂದು ಮೌಖಿಕವಾಗಿ ಹೇಳಿದೆ.
ಅವಧಿ ಮುಗಿದ ರಾಜ್ಯದ 5,950 ಗ್ರಾಮ ಪಂಚಾಯಿತಿಗಳಿಗೆ ಹಾಗೂ 187 ನಗರ ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಅನುಕೂಲವಾಗುವಂತೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಗ್ರಾ.ಪಂ. ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಈವರೆಗೆ ಕೈಗೊಂಡಿರುವ ಕ್ರಮಗಳ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 29ಕ್ಕೆ ಮುಂದೂಡಿತು.
ಸರ್ಕಾರ ಹೇಳಿದ್ದೇನು?
ಈ ವರ್ಷದ ಜನವರಿಯಲ್ಲಿ ಅವಧಿ ಮುಗಿದ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗದ ಪತ್ರ ಆಧರಿಸಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ 2026ರ ಜನವರಿ 28ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸದ್ಯ ಚಾಲ್ತಿಯಲ್ಲಿರುವ ಹಿಂದಿನ ಜನಗಣತಿ ಅಧರಿಸಿ ಪ್ರತಿ ಗ್ರಾ.ಪಂ.ಗೆ ಎಷ್ಟು ಸದಸ್ಯರು ಆಯ್ಕೆಯಾಗಬೇಕು ಎಂಬುದನ್ನು ಕರ್ನಾಟಕ ರಾಜ್ಯ ಕ್ಷೇತ್ರ ಮರುವಿಂಗಡಣಾ ಆಯೋಗ ನಿರ್ಧರಿಸಿ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದರಂತೆ, ಅಗತ್ಯ ಅಂಕಿ-ಸಂಖ್ಯೆಗಳ ಮಾಹಿತಿಯನ್ನು 15 ದಿನಗಳಲ್ಲಿ ಆಯೋಗಕ್ಕೆ ಒಗದಿಸುವಂತೆ ಮಾರ್ಚ್ 18ರಂದು ಕ್ಷೇತ್ರ ಮರುವಿಂಗಡಣಾ ಆಯೋಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಂದ ಆಯೋಗಕ್ಕೆ ಮಾಹಿತಿ ಬರಲು 2 ವಾರಗಳು ಬೇಕು. ಆ ಮಾಹಿತಿ ಪರಿಶೀಲಿಸಿ, ಸರ್ಕಾರಕ್ಕೆ ಶಿಫಾರಸು ಮಾಡಲು ಆಯೋಗಕ್ಕೆ 1 ವಾರ ಕಾಲಾವಕಾಶ ಬೇಕು. ಆಯೋಗದ ಶಿಫಾರಸು ಪರಿಶೀಲಿಸಿ, ಒಟ್ಟು ಸದಸ್ಯರ ಸಂಖ್ಯೆ ನಿಗದಿಪಡಿಸಲು ಸರ್ಕಾರಕ್ಕೆ 1 ವಾರ ಕಾಲಾವಕಾಶಬೇಕು. ಚುನಾಯಿತರಾಗಬೇಕಾದ ಒಟ್ಟು ಸದಸ್ಯರ ಅಂತಿಮ ಸಂಖ್ಯೆ ನಿಗದಿಯಾದ ಬಳಿಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಮೀಸಲಾತಿ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸರ್ಕಾರ ಲಿಖಿತವಾಗಿ ಹೇಳಿದೆ.
ಇದೇ ವೇಳೆ, ಲಭ್ಯ ಮಾಹಿತಿಯ ಪ್ರಕಾರ ಸದಸ್ಯರ ಸಂಖ್ಯೆ ಅಂತಿಮಗೊಂಡ ಬಳಿಕ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ನ್ಯಾಯಾಲಯಕ್ಕೆ ಮೌಖಿಕವಾಗಿ ತಿಳಿಸಿದರು.
167 ಸ್ಥಳೀಯ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಪೂರ್ಣ:
ರಾಜ್ಯದ 47 ನಗರಸಭೆ, 91 ಪುರಸಭೆ, 49 ಪಟ್ಟಣ ಪಂಚಾಯಿತಿಗಳು ಸೇರಿ ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ಒಟ್ಟು 187 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 167 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಕಾರ್ಯ ಮುಗಿದಿದ್ದು, 21 ಮಾತ್ರ ಬಾಕಿ ಇದೆ. ಅದೇ ರೀತಿ 23 ನಗರ ಸ್ಥಳೀಯ ಸಂಸ್ಥೆಗಳ ಕರಡು ಮೀಸಲಾತಿ ಅಧಿಸೂಚನೆ ಹೊರಡಿಸಿದ್ದು, ಅಂತಿಮ ಅಧಿಸೂಚನೆ ಪರಿಶೀಲನೆಯಲ್ಲಿದೆ. 143 ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್ವಾರು ಕರಡು ಮೀಸಲಾತಿ ಪ್ರಕಟಣೆ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
Related Articles
Thank you for your comment. It is awaiting moderation.


Comments (0)