ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
- by Jagan Ramesh
- March 5, 2026
- 7 Views
ಬೆಂಗಳೂರು: ಬಿಜೆಪಿ ಮುಖಂಡರ ಚಿತ್ರಗಳನ್ನು ಆಕ್ಷೇಪಾರ್ಹ ಹೇಳಿಕೆಗಳೊಂದಿಗೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಹಾಗೂ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಎಸಿಎಂಎಂ ಕೋರ್ಟ್) ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಡಿ.ಕೆ. ಶಿವಕುಮಾರ್ ಅವರಿಗೆ ಸೀಮಿತವಾಗಿ ಪ್ರಕರಣಕ್ಕೆ ತಡೆಯಾಜ್ಞೆ ನೀಡಿತಲ್ಲದೆ, ಪ್ರತಿವಾದಿಗಳಾದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಹಾಗೂ ಖಾಸಗಿ ದೂರುದಾರರಾದ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ ಹೊಡಾಘಟ್ಟ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ವಾದವೇನು?
ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್ ಪರ ವಕೀಲ ಎಚ್.ವಿ. ಪ್ರವೀಣ್ ಕುಮಾರ್ ವಾದ ಮಂಡಿಸಿ, ಬಿಜೆಪಿ ನಾಯಕರು ಆರ್ಟಿಜಿಎಸ್ ಮೂಲಕ ಲಂಚ ಪಡೆದಿದ್ದಾರೆ ಎಂಬ ಒಕ್ಕಣೆಯನ್ನು ಒಳಗೊಂಡ ಚಿತ್ರವನ್ನು ಕಾಂಗ್ರೆಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣವನ್ನು ಉಲ್ಲೇಖಿಸಿ, ಪ್ರಕರಣ ದಾಖಲಿಸಲು ವಿಚಾರಣಾ ನ್ಯಾಯಾಲಯ ಆದೇಶಿಸಿದೆ. ಸಿಆರ್ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಲು ಮೇಲ್ನೋಟಕ್ಕೆ ಪ್ರಕರಣ ಇದೆಯೇ ಎಂಬ ಅಂಶಗಳನ್ನು ಉಲ್ಲೇಖಿಸದೇ ಆದೇಶ ಮಾಡಲಾಗಿದೆ. ಪ್ರಕ್ರಿಯೆ ಅಗತ್ಯತೆ ಬಗ್ಗೆ ಮಾತ್ರ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಪರಾಧದ ಸಂತೃಪ್ತಿಯ ಬಗ್ಗೆ ಆದೇಶದಲ್ಲಿ ಏನನ್ನೂ ಹೇಳಿಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದ ಆದೇಶವನ್ನು ವಿಚಾರಣಾ ನ್ಯಾಯಾಲಯ ಸಂಪೂರ್ಣವಾಗಿ ಪಾಲಿಸಿಲ್ಲ. 2024ರ ಜನವರಿ 6ರಂದು ಪೊಲೀಸರಿಗೆ ನೀಡಿರುವ ದೂರನ್ನು ಪರಿಶೀಲಿಸಬಹುದು. ಮೊದಲಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅದಾದ 5 ದಿನಗಳ ಬಳಿಕ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಜನವರಿ 21ರಂದು ದೂರುದಾರರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣವನ್ನು ಲಲಿತಾ ಕುಮಾರಿ ಪ್ರಕರಣದಲ್ಲಿನ ತೀರ್ಪಿನ ಜತೆ ಓದಬೇಕಾಗುತ್ತದೆ. ಪೊಲೀಸ್ ಅಧಿಕಾರಿಗೆ ಸೂಕ್ತ ಕಾಲಾವಕಾಶ ನೀಡಬೇಕು. ಪೊಲೀಸರ ನಿರ್ಧಾರದ ಬಗ್ಗೆ ತಿಳಿದುಕೊಳ್ಳುವವರೆಗೆ ದೂರುದಾರರು ಆತುರ ಮಾಡಲಾಗದು ಎಂದರು.
ಪ್ರಕರಣವೇನು?
ಮೂರು ದಶಕಗಳ ಹಿಂದೆ ರಾಮ ಜನ್ಮಭೂಮಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿಯು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಆ ಸಂದರ್ಭದಲ್ಲಿ ಬಿಜೆಪಿ ನಾಯಕರು “ನಾನೂ ಕರಸೇವಕ; ನನ್ನನ್ನೂ ಬಂಧಿಸಿ” ಎಂಬ ಒಕ್ಕಣೆ ಹೊಂದಿದ್ದ ಭಿತ್ತಿಪತ್ರ ಹಿಡಿದು ಅಭಿಯಾನ ನಡೆಸಿದ್ದರು.
ಇದನ್ನು ಟೀಕಿಸುವ ಉದ್ದೇಶದಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಫೋಟೊ ಬಳಸಿ “ನಾನು ಆರ್ಟಿಜಿಎಸ್ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿ ಅಕ್ರಮದಲ್ಲಿ ಪಾಲುದಾರ ನನ್ನನ್ನು ಬಂಧಿಸಿ” ಎಂದೂ, ಶಾಸಕ ವಿ. ಸುನೀಲ್ ಕುಮಾರ್ ಫೋಟೊ ಬಳಸಿ “ನಾನು ಪರಶುರಾಮ ಮೂರ್ತಿ ಕಂಚನ್ನು ಕದ್ದಿದ್ದೇನೆ; ಸಿಮೆಂಟ್ ಕದ್ದಿದ್ದೇನೆ ನನ್ನನ್ನೂ ಬಂಧಿಸಿ” ಎಂಬ ಒಕ್ಕಣೆಯ ಚಿತ್ರಗಳನ್ನು ಪೋಸ್ಟ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಯೂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಬಿ.ಆರ್. ನಾಯ್ಡು ವಿರುದ್ಧ ಬಿಜೆಪಿಯ ಕಾನೂನು ಘಟಕದ ಸಂಚಾಲಕ ಯೋಗೇಂದ್ರ ಹೊಡಾಘಟ್ಟ ನೀಡಿದ್ದ ಖಾಸಗಿ ದೂರು ಆಧರಿಸಿ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Related Articles
Thank you for your comment. It is awaiting moderation.


Comments (0)