ಸಿಬ್ಬಂದಿ ವರ್ಗಾವಣೆಗೆ 3 ತಿಂಗಳೊಳಗೆ ಮಾರ್ಗಸೂಚಿ ರೂಪಿಸುವಂತೆ ವಾಯುವ್ಯ ಸಾರಿಗೆ ನಿಗಮಕ್ಕೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- February 27, 2026
- 10 Views
ಬೆಂಗಳೂರು: ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 3 ತಿಂಗಳಲ್ಲಿ ಮಾರ್ಗಸೂಚಿಗಳನ್ನು ರೂಪಿಸುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ (ಎನ್ಡಬ್ಲ್ಯುಕೆಆರ್ಟಿಸಿ) ನಿರ್ದೇಶಿಸಿರುವ ಹೈಕೋರ್ಟ್, ಮಾರ್ಗಸೂಚಿ ಅನುಪಸ್ಥಿತಿಯಲ್ಲಿ, ನೌಕರನ ಮನವಿಯೂ ಇಲ್ಲದೆ ಮಾಡಿದ್ದ ಚಾಲಕ ಕಂ ನಿರ್ವಾಹಕರೊಬ್ಬರ ವರ್ಗಾವಣೆಯನ್ನು ರದ್ದುಪಡಿಸಿದೆ.
ಚಿಕ್ಕೋಡಿ ವಿಭಾಗದಿಂದ ಬೆಳಗಾವಿ/ಖಾನಾಪುರ ವಿಭಾಗಕ್ಕೆ ವರ್ಗಾವಣೆ ಮಾಡಿದ್ದ ಆದೇಶ ರದ್ದು ಕೋರಿ ಚಾಲಕ ಚಂದ್ರಕಾಂತ್ ವೈ. ತೊರವಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದ್ದು, ಪ್ರಸ್ತುತ ಮಾರ್ಗಸೂಚಿಗಳು ಇಲ್ಲದ ಕಾರಣ ಮಾರ್ಗಸೂಚಿ ರೂಪಿಸುವವರೆಗೆ ಆಡಳಿತಾತ್ಮಕ ಆಧಾರದ ಮೇಲೆ ವರ್ಗಾವಣೆಗಳನ್ನು ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನೂ ಸಹ ನೀಡಬೇಕಾಗುತ್ತದೆ ಎಂದು ಹೇಳಿದೆ.
ಯಾವ ಮಾರ್ಗಸೂಚಿ ಅಥವಾ ಸುತ್ತೋಲೆ ಆಧಾರದಲ್ಲಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂಬ ಈ ನ್ಯಾಯಾಲಯದ ಪ್ರಶ್ನೆಗೆ ನಿಗಮದ ಪರ ವಕೀಲರು, 2015ರ ಸುತ್ತೋಲೆ ಆಧರಿಸಿ ಆಡಳಿತಾತ್ಮಕ ಕಾರಣಗಳನ್ನು ನೀಡಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಮಾರ್ಗಸೂಚಿಗಳಿಲ್ಲದೆ ವರ್ಗಾವಣೆ ಮಾಡುವುದು ಏಕಪಕ್ಷೀಯ ಕ್ರಮವಾಗುತ್ತದೆ ಎಂದು ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರು ನಿಗಮದ ಉದ್ಯೋಗಿಯಾಗಿರುವುದರಿಂದ ವರ್ಗಾವಣೆ ಆದೇಶ ಪ್ರಶ್ನಿಸುವ ಅರ್ಹತೆ ಇಲ್ಲ. ಆದರೆ, ಸಂಸ್ಥೆಯ ದಕ್ಷತೆ, ಸಮಗ್ರತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ನೌಕರರ ವರ್ಗಾವಣೆ ಒಂದು ಪ್ರಮುಖ ಆಡಳಿತಾತ್ಮಕ ಸಾಧನವಾಗಿದ್ದರೂ, ವರ್ಗಾವಣೆಗಳನ್ನು ಅನಿಯಂತ್ರಿತವಾಗಿ ಅಥವಾ ಏಕರೂಪದ ಮಾನದಂಡಗಳಿಲ್ಲದೆ ಮಾಡಿದಾಗ, ಅವು ಅಸಮಾಧಾನ ಮತ್ತು ದುರುದ್ದೇಶಪೂರಿತ ಆರೋಪಕ್ಕೆ ಕಾರಣವಾಗುತ್ತವೆ. ಆದ್ದರಿಂದ, ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸುವುದು ಕೇವಲ ಆಡಳಿತಾತ್ಮಕ ಔಪಚಾರಿಕತೆಗಿಂತ ಅಗತ್ಯವಾಗಿದ್ದು, ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸಲು ಇದು ಸಕಾಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ವರ್ಗಾವಣೆ ರದ್ದು:
ಅರ್ಜಿದಾರರು ಕಳೆದ 13 ವರ್ಷಗಳಿಂದ ಚಿಕ್ಕೋಡಿ ವಿಭಾಗದ ನಿಗಮದಲ್ಲಿ ಕೆಲಸ ಮಾಡುತ್ತಿರುವ ನಾಲ್ಕನೇ ದರ್ಜೆ ಉದ್ಯೋಗಿಯಾಗಿದ್ದು, 4ನೇ ದರ್ಜೆಯ ನೌಕರರ ಸಾಮಾನ್ಯ ವರ್ಗಾವಣೆಗಳು ಕೋರಿಕೆ ಮೇರೆಗೆ ನಡೆಯುತ್ತವೆ. ಆದರೆ, ಅರ್ಜಿದಾರರು ಯಾವುದೇ ವಿನಂತಿ ಮಾಡಿರದಿದ್ದರೂ, ವರ್ಗಾವಣೆ ಕೋರಿದ್ದ 43 ಉದ್ಯೋಗಿಗಳೊಂದಿಗೆ, ಅರ್ಜಿದಾರರನ್ನೂ ವರ್ಗಾಯಿಸಲಾಗಿದೆ. ಅರ್ಜಿದಾರರ ವರ್ಗಾವಣೆಯ ಹಿಂದೆ ಆಡಳಿತಾತ್ಮಕ ಕಾರಣವಿದೆ ಎಂದು ಭಾವಿಸಿದರೂ, ವರ್ಗಾವಣೆ ಆದೇಶ ಕಾರಣಗಳನ್ನು ಒಳಗೊಂಡಿರಬೇಕಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅಂಥ ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರರನ್ನು ಹೊರತುಪಡಿಸಿ, ಆಡಳಿತಾತ್ಮಕ ಆಧಾರದ ಮೇಲೆ ಬೇರೆ ಯಾವುದೇ ಉದ್ಯೋಗಿಯನ್ನು ವರ್ಗಾಯಿಸಿಲ್ಲ. ನಿಗಮದ ವಕೀಲರು ಅವಲಂಬಿಸಿರುವ ಸುತ್ತೋಲೆಯು ಮನವಿ ಮೇರೆಯ ವರ್ಗಾವಣೆಗಳಿಗೆ ಅನ್ವಯಿಸುತ್ತದೆ ಮತ್ತು ಅರ್ಜಿದಾರರನ್ನು ಏಕೆ ವರ್ಗಾಯಿಸಲಾಗಿದೆ ಮತ್ತು ಅದಕ್ಕೆ ಕಾರಣಗಳು ಮತ್ತು ತುರ್ತುಸ್ಥಿತಿಗಳು ಯಾವುವು ಎಂಬುದರ ಕುರಿತು ಯಾವುದೇ ವಿವರಗಳನ್ನೂ ಸಹ ಒಳಗೊಂಡಿಲ್ಲ. ಆದ್ದರಿಂದ, ಅವರ ವರ್ಗಾವಣೆ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವೇನು?
ಅರ್ಜಿದಾರರು 2006ರ ಮೇ 30ರಂದು ಚಾಲಕ ಕಂ ನಿರ್ವಾಹಕರಾಗಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಅವರ ಸೇವೆಯನ್ನು 2012ರಲ್ಲಿ ಕಾಯಂಗೊಳಿಸಲಾಗಿತ್ತು. 13 ವರ್ಷಗಳಿಂದ ಅವರು ಚಿಕ್ಕೋಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು. ಈ ಮಧ್ಯೆ ಅರ್ಜಿದಾರರು ಯಾವುದೇ ಮನವಿ ಮಾಡದಿದ್ದರೂ 2014ರ ನವೆಂಬರ್ 30ರಂದು ಚಿಕ್ಕೋಡಿ ವಿಭಾಗದಿಂದ ಬೆಳಗಾವಿ/ಖಾನಾಪುರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
Related Articles
Thank you for your comment. It is awaiting moderation.


Comments (0)