ಅತ್ಯಾಚಾರ ಆರೋಪ; ರಕ್ಷಣಾ ಇಲಾಖೆ ಅಧಿಕಾರಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ
- by Prashanth Basavapatna
- February 9, 2026
- 10 Views
ಬೆಂಗಳೂರು: ಶಾದಿ.ಕಾಂನಲ್ಲಿ ಪರಿಚಯವಾದ ವಿಚ್ಛೇದಿತ ಮಹಿಳೆಯನ್ನು ವರಿಸಿ, ಒಪ್ಪಿತ ಲೈಂಗಿಕ ಸಂಬಂಧ ಹೊಂದಿದ್ದರೂ ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ನಿವೃತ್ತಿ ಅಂಚಿನಲ್ಲಿರುವ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಮಹಾರಾಷ್ಟ್ರದ ಮುಂಬೈ ನಿವಾಸಿಯಾದ ರಕ್ಷಣಾ ಇಲಾಖೆಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿರುವ ಅಶೋಕ್ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎನ್. ಶ್ರೀನಿವಾಸ್ ವಾದ ಮಂಡಿಸಿ, ಅರ್ಜಿದಾರ ಮತ್ತು ದೂರುದಾರೆ ವಿಚ್ಛೇದಿತರಾಗಿದ್ದು, ಎರಡನೇ ಮದುವೆಯಾಗಿದ್ದಾರೆ. ಮದುವೆಯಾಗಿ ಎರಡು ದಿನಗಳ ಬಳಿಕ ಅರ್ಜಿದಾರರು ವೃತ್ತಿ ನಿಮಿತ್ತ ಮುಂಬೈಗೆ ಹೊರಟು ಹೋಗಿದ್ದಾರೆ. ಆ ಸಂದರ್ಭದಲ್ಲಿ ತಾನು ಗರ್ಭವತಿಯಾಗಿದ್ದೆ ಎನ್ನುವುದು ದೂರುದಾರೆಯ ಆರೋಪವಾಗಿದೆ. ಮುಂಬೈಗೆ ತೆರಳಿದ ಬಳಿಕ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ, ಭ್ರೂಣ ತೆಗೆಸಲು ಒತ್ತಾಯಿಸುತ್ತಿದ್ದಾರೆ ಎಂಬುದು ಆರೋಪವಾಗಿದೆ. ಮದುವೆಯ ಬಳಿಕ ಅರ್ಜಿದಾರರಿಂದ ಎಲ್ಲ ಹಣವನ್ನು ದೂರುದಾರೆ ಕಿತ್ತುಕೊಂಡಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರಿಗೆ 59 ವರ್ಷವಾಗಿದೆ. ದೂರುದಾರೆಗೆ 32 ವರ್ಷವಾಗಿದೆ. ಮದುವೆಯ ಭರವಸೆ? 59 ವರ್ಷದಲ್ಲಿ ಏನು ಮಾಡ್ತಾ ಇದ್ರೀ? ನಿವೃತ್ತಿಗೆ ಒಂದು ವರ್ಷವಿದೆ. ಇದೆಲ್ಲ ಬೇಕಿತ್ತಾ? ನಿವೃತ್ತಿಯ ಅಂಚಿನಲ್ಲಿದ್ದಾಗ ಮಾಡಿದರೆ ಎಲ್ಲ ಹೋಗುತ್ತದೆ. ನಿವೃತ್ತಿಯ ಲಾಭ ಏನೂ ಇರುವುದಿಲ್ಲ. ನೈಜ ಕುಟುಂಬಕ್ಕೆ ಹಾನಿಯಾಗುತ್ತದೆ. 59 ವರ್ಷ ಮತ್ತು 32 ವರ್ಷ ಒಪ್ಪಿತ, ಬರೆಯೋಕೆ ಬೇಜಾರಾಗುತ್ತದೆ ಎಂದು ಹೇಳಿತು.
ಅಂತಿಮವಾಗಿ ನ್ಯಾಯಪೀಠ, ಅರ್ಜಿದಾರರು ಭಾರತ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅರ್ಜಿದಾರರು ಮತ್ತು ದೂರುದಾರೆ ಶಾದಿ.ಕಾಂನಲ್ಲಿ ಪರಿಚಿತರಾಗಿದ್ದರು. ಆನಂತರ, ಸ್ನೇಹಿತರಾಗಿ ಬಳಿಕ ಅದು ಸಂಬಂಧಕ್ಕೆ ತಿರುಗಿದೆ. ಬಳಿಕ ಅದು ಲೈಂಗಿಕ ಸಂಬಂಧಕ್ಕೂ ವಿಸ್ತರಿಸಿತ್ತು. ತಾನು ಗರ್ಭ ಧರಿಸಿದ ಬಳಿಕ ಅರ್ಜಿದಾರ ಮುಂಬೈಗೆ ಪರಾರಿಯಾಗಿದ್ದಾರೆ ಎಂದು ದೂರುದಾರೆ ದೂರಿದ್ದರಿಂದ ಪ್ರಕರಣ ದಾಖಲಾಗಿದೆ. ಇಬ್ಬರ ನಡುವಿನ ಲೈಂಗಿಕ ಸಂಬಂಧವು ಒಪ್ಪಿತವಾಗಿರುವುದರಿಂದ ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506 ಅಡಿ ಪ್ರಕ್ರಿಯೆ ಮುಂದುವರಿಸಲು ಅನುಮತಿಸುವುದು ಧ್ರುವರಾಮ್ ಮೊದಲಿಯಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಲಿದೆ. ಆದ್ದರಿಂದ, ಪ್ರಕರಣಕ್ಕೆ ತಡೆ ನೀಡಲಾಗಿದೆ ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)