ಅಕ್ರಮ ಹಣ ವರ್ಗಾವಣೆ ಪ್ರಕರಣ; ಶಾಸಕ ಸತೀಶ್ ಸೈಲ್ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
- by Prashanth Basavapatna
- February 5, 2026
- 10 Views
ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅದಿರು ಸಾಗಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾದ ಶಾಸಕ ಸತೀಶ್ ಸೈಲ್ ಅವರಿಗೆ ಯಕೃತ್ ಕಸಿ ಮಾಡುವ ಅಗತ್ಯವಿದೆ ಎಂಬ ವರದಿಯ ಆಧಾರದಲ್ಲಿ ಹೈಕೋರ್ಟ್ ಗುರುವಾರ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಪ್ರಕರಣದ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಜಾಮೀನುರಹಿತ ಬಂಧನ ವಾರಂಟ್ (ಎನ್ಬಿಡಬ್ಲ್ಯು) ಹೊರಡಿಸಿದ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀಡಲಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ರದ್ದುಪಡಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿತು.
ಅರ್ಜಿದಾರರನ್ನು ಹಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವ ವೈದ್ಯರು, ಯಕೃತ್ ಸಮಸ್ಯೆ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಸೈಲ್ ಅನುಭವಿಸುತ್ತಿದ್ದಾರೆ. ಅವರಿಗೆ ಯಕೃತ್ ಕಸಿ (ಲಿವರ್ ಟ್ರಾನ್ಸ್ಪ್ಲಾಂಟ್) ಮಾಡಬೇಕಿದೆ ಎಂದು ತಿಳಿಸಿ ನ್ಯಾಯಾಲಯಕ್ಕೆ ವರದಿ ಹಾಗೂ ದಾಖಲೆ ಸಲ್ಲಿಸಿದ್ದಾರೆ. ಅರ್ಜಿದಾರರು ಕಾರಾಗೃಹದಲ್ಲಿದ್ದುಕೊಂಡು, ಲಿವರ್ ಕಸಿಗೆ ಒಳಗಾಗಿ ನಂತರ ಕಾಲಕಾಲಕ್ಕೆ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ. ಆದ್ದರಿಂದ, ಸೈಲ್ಗೆ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಇದೇ ವೇಳೆ, ಸತೀಶ್ ಸೈಲ್ ಅವರು 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ವೈದ್ಯಕೀಯ ಸ್ಥಿತಿಗತಿ ಕುರಿತು 8 ವಾರಕ್ಕೊಮ್ಮೆ ನ್ಯಾಯಾಲಯಕ್ಕೆ ತಿಳಿಸಬೇಕು. ಲಿವರ್ ಕಸಿ ಬಗ್ಗೆ 2 ವಾರದಲ್ಲಿ ಮಾಹಿತಿ ನೀಡಬೇಕು. ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸುವಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ನ್ಯಾಯಾಲಯದ ಈ ಆದೇಶ ಪ್ರತಿ ಲಭ್ಯವಾಗುವವರೆಗೆ ಅರ್ಜಿದಾರರಿಗೆ ಈಗಾಗಲೇ ಹೈಕೋರ್ಟ್ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನು ಮುಂದುವರಿಯಲಿದೆ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಹಣ ಅಕ್ರಮ ವರ್ಗಾವಣೆ ಕುರಿತಂತೆ 2025ರ ಸೆಪ್ಟೆಂಬರ್ 10ರಂದು ಸತೀಶ್ ಸೈಲ್ ಅವರನ್ನು ಇಡಿ ವಶಕ್ಕೆ ಪಡೆದಿತ್ತು. ಇಡಿ ಕಸ್ಟಡಿಯಲ್ಲಿದ್ದಾಗಲೇ ಸೈಲ್ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. 2025ರ ಸೆಪ್ಟೆಂಬರ್ 12ರಂದು ಸೈಲ್ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಸೈಲ್ಗೆ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತ್ತು.
ಪ್ರಕರಣದ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ 2025ರ ನವೆಂಬರ್ 7ರಂದು ವಿಶೇಷ ನ್ಯಾಯಾಯ ವೈದ್ಯಕೀಯ ಜಾಮೀನು ರದ್ದುಪಡಿಸಿತ್ತು. ಆ ಆದೇಶ ಪ್ರಶ್ನಿಸಿ ಸೈಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸತೀಶ್ ಸೈಲ್ ಅವರಿಗೆ ಮಂಜೂರಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಹೈಕೋರ್ಟ್ ಮುಂದುವರಿಸಿತ್ತು. ಆ ಜಾಮೀನನ್ನು ಹೈಕೋರ್ಟ್ ಗುರುವಾರ ಕಾಯಂಗೊಳಿಸಿದೆ.
Related Articles
Thank you for your comment. It is awaiting moderation.


Comments (0)