ಅಕ್ರಮ ವಲಸಿಗರ ವಿಚಾರದಲ್ಲಿ ಕೈಗೊಂಡ ಕ್ರಮಗಳೇನು?; ರಾಜ್ಯ ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್
- by Jagan Ramesh
- February 4, 2026
- 9 Views
ಬೆಂಗಳೂರು: ಅಕ್ರಮ ವಲಸಿಗರಿಂದ ರಾಷ್ಟ್ರದ ಭದ್ರತೆಗೆ ಅಪಾಯವಿದೆ ಎಂದು ಮೌಖಿಕವಾಗಿ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಇಂಥವರ ವಿಚಾರದಲ್ಲಿ ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಇದೇ ವೇಳೆ, ಬಾಂಗ್ಲಾ ಅಕ್ರಮ ವಲಸಿಗರ ವಿಚಾರವಾಗಿ ಹೋರಾಟ ಮಾಡಿದ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧದ ಒಂದು ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಗೆ ತಡೆ ನೀಡಿ, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪುನೀತ್ ಕೆರೆಹಳ್ಳಿ ಅಲಿಯಾಸ್ ಪುನೀತ್ ಕುಮಾರ್ ಸಲ್ಲಿಸಿರುವ ಅರ್ಜಿಗಳನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
ಇದಕ್ಕೂ ಮುನ್ನ ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಪೀಠ, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್‌ಆರ್‌ಆರ್‌ಒ) ನೋಂದಣಿ ಮಾಡಿಸದವರನ್ನು ಪತ್ತೆ ಮಾಡುವುದು ರಾಜ್ಯ ಸರ್ಕಾರದ ಕೆಲಸ. ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಅರ್ಜಿದಾರರು ತೋರಿಸಿದ್ದಾರೆ. ಅದಕ್ಕೆ ನೀವು ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಹೇಗೆ? ವಿದೇಶದಿಂದ ಬಂದಿರುವವರು ಬೆಂಗಳೂರಿನ ಎಲ್ಲ ಕಡೆ ನೆಲೆಸಿದ್ದಾರೆ. ಯಾರ ಬಳಿಯೂ ವೀಸಾ, ಅನುಮತಿ ಇಲ್ಲ. ಅದಾಗ್ಯೂ, ಅವರು ಇಲ್ಲಿ ನೆಲೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅರ್ಜಿದಾರರು ಅದನ್ನು ತೋರಿಸಿದ್ದಕ್ಕೆ ನಿಮಗೆ ಸಮಸ್ಯೆಯೇ? ಎಂದು ಸರ್ಕಾರವನ್ನು ಕುಟುಕಿತು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಅರ್ಜಿದಾರರು ದಾಖಲೆ ತೋರಿಸಲಿ. ಅಕ್ರಮ ವಲಸಿಗರನ್ನು ಗುರುತಿಸಲು ವಿಧಾನವಿದೆ. ನೇರವಾಗಿ ಅಲ್ಲಿಗೆ ಹೋಗಿ ಹಲ್ಲೆ ನಡೆಸಲಾಗದು. ಅಕ್ರಮ ವಲಸಿಗರನ್ನು ಬಂಧನದಲ್ಲಿ ಇಡಲಾಗಿದೆ. ದೇಶದಿಂದ ಹೊರಗೆ ಕಳುಹಿಸುವುದರ ಕುರಿತು ಎಫ್‌ಆರ್‌ಆರ್‌ಒ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶದ ವಲಸಿಗರ ಕುರಿತು ಎಫ್‌ಆರ್‌ಆರ್‌ಒಗೆ ಮಾಹಿತಿ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಆಗ ನ್ಯಾಯಪೀಠ, ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಸರ್ಕಾರದ ಕೆಲಸ. ಅರ್ಜಿದಾರರು ಅದನ್ನು ಬಿಂಬಿಸಿದ್ದಾರೆ ಅಷ್ಟೆ. ತನಿಖೆ ನಡೆಸಿ, ಸರ್ಕಾರ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಸರ್ಕಾರ ಏನಾದರೂ ಕ್ರಮ ಕೈಗೊಂಡಿದೆಯೇ? ಯಾವ ಕ್ರಮ ಕೈಗೊಂಡಿದ್ದೀರಿ? ಅವಧಿ ಮೀರಿ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಸಲ್ಲಿಸಬೇಕು. ಯಾವಾಗ ಅವರನ್ನು ದೇಶದಿಂದ ಹೊರಗೆ ಕಳುಹಿಸುತ್ತೀರಿ? ಎಫ್‌ಆರ್‌ಆರ್‌ಒಗೆ ಸಮನ್ಸ್ ಜಾರಿ ಮಾಡಲಾಗುವುದು. ಒಂದು ದೇಶ ಅಥವಾ ಇನ್ನೊಂದು ದೇಶದ ಬಗ್ಗೆ ನಾನು ಮಾತನಾಡುತ್ತಿಲ್ಲ. ಅಕ್ರಮ ವಲಸಿಗರು ಎಲ್ಲ ಕಡೆ ಇದ್ದಾರೆ ಎಂದು ಹೇಳಿತು.
ಅಂತಿಮವಾಗಿ ನ್ಯಾಯಪೀಠ, ಬೆಂಗಳೂರಿನಲ್ಲಿ ನೆಲೆಸಿರುವ ಸುಮಾರು 20 ಲಕ್ಷ ಅಕ್ರಮ ವಲಸಿಗರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತಲ್ಲದೆ, ಒಂದು ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧದ ತನಿಖೆಗೆ ತಡೆ ನೀಡಿ, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)