ಬಿಕ್ಲು ಶಿವ ಕೊಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ಪಾತ್ರವೂ ಇದೆ; ಹೈಕೋರ್ಟ್‌ನಲ್ಲಿ ಸಿಐಡಿ ಆಪಾದನೆ

ಬೆಂಗಳೂರು: ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮದೇ ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಪಾತ್ರವಿದೆ. ಇದೊಂದು ಸಂಘಟಿತ ಅಪರಾಧವಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಬೈರತಿ ಬಸವರಾಜು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ಮು ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಮುಂದುವರಿಸಿತು.

ಸಿಐಡಿ ಪರ ವಾದ ವಿಸ್ತರಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ. ಎನ್‌. ಜಗದೀಶ್‌ ಅವರು, ಹತ್ಯೆಗೂ ಮುನ್ನ ಕೊಲೆ ಬೆದರಿಕೆ ಮತ್ತು ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಭಾರತಿನಗರ ಪೊಲೀಸ್ ಠಾಣೆಗೆ ಬಿಕ್ಲು ಶಿವ ದೂರು ನೀಡಿದ್ದರು. ಕೊಲೆ ಯತ್ನಕ್ಕೆ ಭಾರತಿ ಎಂಬವರ ಬೈಕ್‌ ಬಳಕೆ ಮಾಡಲಾಗಿತ್ತು. ಇದಕ್ಕೆ ಬೈರತಿ ಬಸವರಾಜು ಅವರ ಬೆಂಬಲಿಗ ಎನ್ನಲಾದ ಜಗದೀಶ್‌ ಅಲಿಯಾಸ್‌ ಜಗ್ಗ ಚಿತಾವಣೆ ನೀಡಿದ್ದಾನೆ ಎಂದು ಬಿಕ್ಲು ಶಿವ ಶಂಕಿಸಿದ್ದರು. ಆದರೆ, ಪೊಲೀಸರು ಆರೋಪಿಗಳನ್ನು ಕರೆದು ತಿಳಿವಳಿಕೆ ಹೇಳಿರುವುದಾಗಿ ತಿಳಿಸಿ ಎನ್‌ಸಿಆರ್‌ಗೆ ಮುಕ್ತಾಯ ಹಾಡಿದ್ದರು. ಆದರೆ, 2025ರ ಜುಲೈ 15ರಂದು ಬಿಕ್ಲು ಶಿವನ ಕೊಲೆಯಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ ಬಳಿಕ ಸ್ಥಳೀಯ ಪೊಲೀಸರು ತಾವು ಸಿಲುಕುವ ಆತಂಕದಿಂದ ಕೊಲೆ ಯತ್ನಕ್ಕೆ ಬಳಕೆ ಮಾಡಿದ್ದ ಭಾರತಿ ಅವರ ಬೈಕ್‌ ಬಳಸುತ್ತಿದ್ದ ಅವರ ಸಹೋದರ ಅಭಿಷೇಕ್‌ ಗೌಡನ ಹೇಳಿಕೆಯನ್ನು ದಾಖಲೆಯ ಭಾಗವಾಗಿಸಿದ್ದಾರೆ. ವಾಸ್ತವದಲ್ಲಿ ಅಭಿಷೇಕ್‌ ಮತ್ತು ಜಗದೀಶ್‌ನನ್ನು ಪೊಲೀಸರು ಠಾಣೆಗೆ ಕರೆಸಿ ಬುದ್ದಿ ಹೇಳಿರಲಿಲ್ಲ. ಇಲ್ಲಿ ಬೈರತಿ ಬಸವರಾಜು ಅವರ ಪಾತ್ರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಅಧಿಕಾರಿಗಳ ಪಾತ್ರ ಇರುವುದು ಸ್ಪಷ್ಟವಾಗಿದೆ ಎಂದು ಪ್ರತಿಪಾದಿಸಿದರು.

ಈ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಧಿಕಾರಿಗಳ ಪಾತ್ರ ಬಯಲು ಮಾಡಲು ಅರ್ಜಿದಾರರನ್ನು ಸುಪರ್ದಿಗೆ ಪಡೆದು ತನಿಖೆ ನಡೆಸಬೇಕಿದೆ. ನಾವು ಸಾಮಾನ್ಯ ವ್ಯಕ್ತಿಯ ಜತೆ ವ್ಯವಹರಿಸುತ್ತಿಲ್ಲ. ಶಾಸಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲವಾಗಿರುವ ವ್ಯಕ್ತಿಯ ಜತೆ ವ್ಯವಹರಿಸುತ್ತಿದ್ದೇವೆ. ಇದೆಲ್ಲವನ್ನೂ ಮರೆಮಾಚಿ ರಾಜಕೀಯ ದುರುದ್ದೇಶದಿಂದ ಬೈರತಿ ಬಸವರಾಜು ಅವರನ್ನು ಬಂಧಿಸಲು ಪ್ರಾಸಿಕ್ಯೂಷನ್‌ ಯತ್ನಿಸುತ್ತಿದೆ ಎಂದು ಹೇಳುವುದು ಶುದ್ಧ ಅಪಪ್ರಚಾರ ಎಂದರು.

ದೂರುದಾರೆ (ಬಿಕ್ಲು ಶಿವ ತಾಯಿ) ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನು ಬೈರತಿ ಬಸವರಾಜು ಆಧರಿಸುತ್ತಿದ್ದಾರೆ. ಆಕೆ ಆ ರೀತಿ ಹೇಳಿಕೆ ನೀಡುವಂತೆ ಹೇಗೆ ಮಾಡಲಾಗಿದೆ ಎಂಬುದನ್ನು ತೋರಿಸುತ್ತೇನೆ. ಬಂಧಿಸಿಲ್ಲ, ತನಿಖೆಯಾಗಿಲ್ಲ, ಆರೋಪ ಪಟ್ಟಿ ಹಾಕಿಲ್ಲ. ಈ ಹಂತದಲ್ಲಿ ಸಾಕ್ಷಿಯನ್ನು ಪ್ರಭಾವಿಸುವಾಗ ನಾವು ಏನನ್ನೂ ನಿರೀಕ್ಷಿಸಲಾಗುತ್ತದೆ ಎಂದು ಹೇಳಿದರು.

ಪ್ರಕರಣದಲ್ಲಿ ಪೊಲೀಸರೂ ಭಾಗಿಯಾಗಿದ್ದು, ನಮಗೆ ಸಂಪೂರ್ಣ ಮಾಹಿತಿ ಬೇಕಿದೆ. ಇದಕ್ಕಾಗಿ ಬೈರತಿ ಬಸವರಾಜು ಅವರನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದೆ. ಇದರಲ್ಲಿ ಸಂಘಟಿತ ಅಪರಾಧ ಮತ್ತು ಕೊಲೆ ನಡೆದಿದೆ ಎಂದು ಬಲವಾಗಿ ವಾದ ಮಂಡಿಸಿದರು.

ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಗುರುವಾರಕ್ಕೆ (ಜನವರಿ 22) ಮುಂದೂಡಿತು.

Related Articles

Comments (0)

Leave a Comment