ಇರಾನ್ ವಿರುದ್ಧ ಗೆಲುವು ಸನಿಹದಲ್ಲಿದೆ: ಟ್ರಂಪ್ ವಿಶ್ವಾಸ!
- by Legal Samachar
- November 27, 2026
- 2 Views
ವಾಷಿಂಗ್ಟನ್: ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕದ ಗೆಲುವು ಸನಿಹದಲ್ಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಥ್ಯಾಂಕ್ಸ್ಗಿವಿಂಗ್ ಸಂದರ್ಭದಲ್ಲಿ ಅಮೆರಿಕದ ಯೋಧರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಅವರು, ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡುತ್ತಿರುವುದಾಗಿ ತಿಳಿಸಿದರು.
ಫ್ಲೋರಿಡಾದ ಮಾರಾ-ಎ-ಲಾಗೊ ನಿವಾಸದಿಂದ ಮಾತನಾಡಿದ ಟ್ರಂಪ್, ಒಪ್ಪಂದದಿಂದ ಹಲವು ಜೀವಗಳನ್ನು ಉಳಿಸಬಹುದು ಎಂದರು. ಆದರೆ, ಇರಾನ್ ನಾಯಕರು ಈ ಅವಕಾಶ ಬಳಸಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಇರಾನ್ ಪರಮಾಣು ಅಸ್ತ್ರ ಹೊಂದಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು.

‘ಆಪರೇಷನ್ ಎಪಿಕ್ ಫ್ಯೂರಿ’ಯಲ್ಲಿ ಭಾಗಿಯಾಗಿರುವ ಸೇನಾ ಘಟಕ ಹಾಗೂ ಸೌದಿ ಅರೇಬಿಯಾದಲ್ಲಿರುವ ಎಫ್-16 ಪೈಲಟ್ ಜೊತೆ ಮಾತನಾಡಿದರು. ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಅಮೆರಿಕದ ನೌಕಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಎಂದು ಬಣ್ಣಿಸಿದರು.
ನ್ಯಾಟೋ ರಕ್ಷಣಾ ವೆಚ್ಚ ಹೆಚ್ಚಳವನ್ನು ತಮ್ಮ ಸಾಧನೆ ಎಂದ ಅವರು, ರಷ್ಯಾ-ಉಕ್ರೇನ್ ಯುದ್ಧ ಅಂತ್ಯಗೊಳಿಸಲು ಪುಟಿನ್ ಬಯಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


Comments (0)