ಧ್ರುವ ಸಂಶೋಧನಾ ಕೇಂದ್ರಗಳಲ್ಲಿ ಅಪರೂಪದ ಸೌರ ಕಣಗಳ ಘಟನೆ ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು!
- by Legal Samachar
- November 27, 2026
- 1 Views
ನವದೆಹಲಿ: ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ನಲ್ಲಿರುವ ಭಾರತೀಯ ಸಂಶೋಧನಾ ಕೇಂದ್ರಗಳಲ್ಲಿ ಅಳವಡಿಸಲಾಗಿರುವ ಗಾಮಾ ಕಿರಣ ಶೋಧಕಗಳ ಮೂಲಕ ಅಪರೂಪದ ಸೌರ ಕಣಗಳ ಘಟನೆಯನ್ನು ಭಾರತೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಸಂಶೋಧನೆಯು ಜಾಗತಿಕ ಬಾಹ್ಯಾಕಾಶ ಹವಾಮಾನ ಮೇಲ್ವಿಚಾರಣೆಯನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಮೂಡಿಸಿದೆ.
ಮುಂಬೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಂ (ಐಐಜಿ) ವಿಜ್ಞಾನಿಗಳು 2025ರ ನವೆಂಬರ್ 11ರಂದು ಸಂಭವಿಸಿದ ನೆಲಮಟ್ಟದ ವರ್ಧನೆ (GLE-77) ಘಟನೆಯ ಸಂಕೇತಗಳನ್ನು ದಾಖಲಿಸಿದ್ದಾರೆ. ಆರ್ಕ್ಟಿಕ್ನ ನೈ-ಆಲೆಸುಂಡ್ ಮತ್ತು ಅಂಟಾರ್ಕ್ಟಿಕಾದ ಮೈತ್ರಿ ಸಂಶೋಧನಾ ಕೇಂದ್ರಗಳಲ್ಲಿರುವ ಶೋಧಕಗಳನ್ನು ಬಳಸಿ ಈ ಪತ್ತೆ ಮಾಡಲಾಗಿದೆ.
ಈ ಘಟನೆ ತೀವ್ರ X-ದರ್ಜೆಯ ಸೌರ ಜ್ವಾಲೆ, ವೇಗದ ಕರೋನಲ್ ದ್ರವ್ಯರಾಶಿ ಹೊರಸೂಸುವಿಕೆ ಹಾಗೂ ಶಕ್ತಿಯುತ ಸೌರ ಕಣಗಳ ಹರಿವಿನೊಂದಿಗೆ ಸಂಬಂಧ ಹೊಂದಿದೆ. ಮೈತ್ರಿ ಕೇಂದ್ರದ ಶೋಧಕ ತಕ್ಷಣದ ಸಂಕೇತ ದಾಖಲಿಸಿದರೆ, ನೈ-ಆಲೆಸುಂಡ್ನ ಶೋಧಕದಲ್ಲಿ ಕ್ರಮೇಣ ಬದಲಾವಣೆ ಕಂಡುಬಂದಿದೆ. ಈ ವೀಕ್ಷಣೆಗಳು ಸಾಂಪ್ರದಾಯಿಕ ನ್ಯೂಟ್ರಾನ್ ಮಾನಿಟರ್ಗಳ ದಾಖಲೆಗಳಿಗೂ ಹೊಂದಿಕೆಯಾಗಿವೆ.

ಕಡಿಮೆ ವೆಚ್ಚದ, ಸಾಂದ್ರೀಕೃತ ಗಾಮಾ ಕಿರಣ ಶೋಧಕಗಳನ್ನು ಅಸ್ತಿತ್ವದಲ್ಲಿರುವ ಮೇಲ್ವಿಚಾರಣಾ ವ್ಯವಸ್ಥೆಗಳಿಗೆ ಪೂರಕವಾಗಿ ಬಳಸಬಹುದು. ಇದರಿಂದ ಭೂಮಿಯ ವಿವಿಧ ಪ್ರದೇಶಗಳಲ್ಲಿ ಸೌರ ಚಟುವಟಿಕೆಗಳನ್ನು ಗಮನಿಸುವ ಸಾಮರ್ಥ್ಯ ಹೆಚ್ಚಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಭೂಮಿಯ ವಿಕಿರಣಶೀಲತೆ, ಗುಡುಗು ಸಹಿತ ಮಳೆ ಮತ್ತು ಗಾಮಾ ಕಿರಣ ಸ್ಫೋಟಗಳಂತಹ ಇತರ ಮೂಲಗಳಿಂದ ಸೌರ ಘಟನೆಯ ಸಂಕೇತಗಳನ್ನು ಪ್ರತ್ಯೇಕಿಸುವುದೂ ಅಧ್ಯಯನದ ಪ್ರಮುಖ ಭಾಗವಾಗಿತ್ತು.
ಐಐಜಿಯ ಪ್ರೊ. ಜಿ. ವಿಚಾರೆ, ಪಿ. ಠಾಕೂರ್, ಸಿ. ಸೆಲ್ವರಾಜ್ ಮತ್ತು ನಾಸಾದ ಪ್ರೊ. ಎನ್. ಗೋಪಾಲಸ್ವಾಮಿ ಸಂಶೋಧನಾ ತಂಡದಲ್ಲಿದ್ದರು. ಅಧ್ಯಯನದ ವರದಿ ‘ದಿ ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್’ನಲ್ಲಿ ಪ್ರಕಟವಾಗಿದೆ. ಈ ಸಂಶೋಧನೆಯಿಂದ ಹೆಚ್ಚಿನ ಶಕ್ತಿಯ ಸೌರ ಕಣಗಳು ಮತ್ತು ಭೂಮಿಯ ವಾತಾವರಣದೊಂದಿಗಿನ ಅವುಗಳ ಪರಸ್ಪರ ಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೆರವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


Comments (0)