ಬಾಲ ಕಾರ್ಮಿಕ ನಿರ್ಮೂಲನೆ ಯೋಜನಾ ಸೊಸೈಟಿ ನಿರ್ದೇಶಕನ ವಜಾ ಆದೇಶ ರದ್ದುಪಡಿಸಿದ ಹೈಕೋರ್ಟ್
- by Prashanth Basavapatna
- February 13, 2026
- 122 Views
ಬೆಂಗಳೂರು: ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆ ಬಾಲ ಕಾರ್ಮಿಕ (ನಿರ್ಮೂಲನೆ) ಯೋಜನಾ ಸೊಸೈಟಿಯ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿರುವ ಬಿ.ಎಂ. ಪ್ರವೀಣ್ ಕುಮಾರ್ ಅವರನ್ನು ಹುದ್ದೆಗೆ ಮರು ನಿಯೋಜಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಹುದ್ದೆಯಿಂದ ವಜಾಗೊಳಿಸಿ 2025ರ ಡಿಸೆಂಬರ್ 15ರಂದು ಚಿಕ್ಕಮಗಳೂರು ಉಪ ವಲಯದ ಕಾರ್ಮಿಕ ಅಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪ್ರವೀಣ್ ಕುಮಾರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಇಂತಹ ಸಂದರ್ಭದಲ್ಲಿ ಸೇವೆಯಿಂದ ಅರ್ಜಿದಾರರನ್ನು ವಜಾಗೊಳಿಸಿರುವ ಆದೇಶವನ್ನು ಹಗುರವಾಗಿ ಪರಿಗಣಿಸಲಾಗದು. ಅದರಲ್ಲೂ ನೋಟಿಸ್ ನೀಡದೆ ಸೇವೆಯಿಂದ ವಜಾಗೊಳಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಗಂಭೀರ ಆರೋಪಗಳಿದ್ದಾಗ ಅರ್ಜಿದಾರರಿಗೆ ಸೂಕ್ತ ಅವಕಾಶ ನೀಡಿ, ಅವರ ವಿವರಣೆ ಆಲಿಸದೆ ಸೇವೆಯಿಂದ ವಜಾಗೊಳಿಸುವುದು ಸಂವಿಧಾನದ ಪರಿಚ್ಛೇದ 14ರ ಅಡಿಯ ಸಮಾನತೆ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಅರ್ಜಿದಾರರನ್ನು ವಜಾಗೊಳಿಸಿ ಕಾರ್ಮಿಕ ಅಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿ, ಅವರನ್ನು ಹುದ್ದೆಗೆ ಮರು ನಿಯೋಜಿಸಬೇಕು ಎಂದು ನಿರ್ದೇಶಿಸಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುವ ಸ್ವಾತಂತ್ರ್ಯವನ್ನು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮುಕ್ತವಾಗಿರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರರು 2011ರ ಅಕ್ಟೋಬರ್ 18ರಂದು ಗುತ್ತಿಗೆ ಆಧಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಲ ಕಾರ್ಮಿಕ (ನಿರ್ಮೂಲನೆ) ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿದ್ದರು. ಕರ್ತವ್ಯ ಲೋಪ ಆರೋಪದ ಮೇಲೆ 2025ರ ಡಿಸೆಂಬರ್ 15ರಂದು ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ವಜಾ ಆದೇಶ ಹೊರಡಿಸುವ ಮುನ್ನ ವಿವರಣೆ ನೀಡಲು ಅವಕಾಶ ಕಲ್ಪಿಸಿಲ್ಲ ಎಂದು ಆಕ್ಷೇಪಿಸಿ ಪ್ರವೀಣ್ ಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.



Comments (0)