ಕರ್ನಾಟಕದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಹೀನ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ವಿರಳ; ಹೈಕೋರ್ಟ್ ಮೌಖಿಕ ಅಭಿಪ್ರಾಯ
- by LegalSamachar
- June 29, 2026
- 4 Views
ಬೆಂಗಳೂರು: ಅನ್ಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರಾಜಕೀಯ ಮುಖಂಡರು ಅಥವಾ ಸರ್ಕಾರಿ ಅಧಿಕಾರಿಗಳು ಘೋರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವುದು ಅತಿ ವಿರಳ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಧಾರವಾಡದ ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿರುವ ಮಾಜಿ ಶಾಸಕ ವಿನಯ ಕುಲಕರ್ಣಿ (ಎ15) ಹಾಗೂ ಚಂದ್ರಶೇಖರ್ ಇಂಡಿ (ಎ16), ಮೇಲ್ಮನವಿ ಇತ್ಯರ್ಥವಾಗುವವರೆಗೆ ಶಿಕ್ಷೆ ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ. ಈ ಮೇಲ್ಮನವಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ಮೇಲಿನಂತೆ ಹೇಳಿತು.
ಮೇಲ್ಮನವಿ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಎಸ್.ವಿ. ರಾಜು ಅವರು, ಅತಿ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಯೊಬ್ಬರು ರಾಜಕೀಯ ವಿರೋಧಿಯ ಕೊಲೆ ಪಿತೂರಿ ನಡೆಸಿದ್ದಾರೆ. ಜತೆಗೆ, ಪ್ರಕರಣದಲ್ಲಿ ನೈಜ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಲಾಗಿದೆ. ತನಿಖೆಯು ಸಿಬಿಐ ಹೆಗಲಿಗೆ ಬಿದ್ದಿದ್ದರಿಂದ ವಿನಯ್ ಕುಲಕರ್ಣಿ ಮತ್ತಿತರರ ಯೋಜನೆ ವಿಫಲವಾಗಿದೆ. ಸಿಬಿಐ ಕೊಲೆ ಪ್ರಕರಣವನ್ನು ಭೇದಿಸಿದ್ದು, 7-14ನೇ ಆರೋಪಿಗಳು ನೈಜ ಅಪರಾಧಿಗಳು ಪಿತೂರಿ ನಡೆಸಿದ್ದಾರೆ ಎಂದು ಪತ್ತೆ ಹಚ್ಚಿದೆ. ಇಂಥ ಅತ್ಯುನ್ನತ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗೆ ಜಾಮೀನು ನೀಡುವುದು ಹೇಗೆ? ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಂತದಲ್ಲಿ ನ್ಯಾಯಮೂರ್ತಿ ನವಾಜ್ ಅವರು, ಸರ್ಕಾರಿ ಅಧಿಕಾರಿಗಳು ಅಥವಾ ರಾಜಕಾರಣಿಗಳು ಹೇಯ ಕೃತ್ಯಗಳಲ್ಲಿ ಭಾಗವಹಿಸುವುದು ಬೇರೆ ರಾಜ್ಯಗಳಲ್ಲಿ ಹೆಚ್ಚು. ಕರ್ನಾಟಕ ರಾಜ್ಯದಲ್ಲಿ ಇದು ವಿರಳ. ಅದು ಈ ಕಡೆ ಅಥವಾ ಆ ಕಡೆಯಾಗಿರಬಹುದು. ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳಿವೆ ಎಂದರು.
ಆಗ ಎಎಸ್ಜಿ ಅವರು, ಕರ್ನಾಟಕದಲ್ಲಿ ಹೀನ ಕೃತ್ಯಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಭಾಗಿಯಾಗುವುದು ಕಡಿಮೆ ಎಂದು ಕೇಳಲು ಸಂತೋಷವಾಗುತ್ತದೆ. ಇಂಥ ಟ್ರೆಂಡ್ ಆರಂಭವಾದರೆ ಅದನ್ನು ಎಳೆಯದರಲ್ಲಿಯೇ ಚಿವುಟಿ ಹಾಕಬೇಕಿದೆ. ಘೋರ ಅಪರಾಧದ ಫಲವನ್ನು ಅನುಭವಿಸಲು ಯಾರಿಗೂ ಅವಕಾಶ ನೀಡಬಾರದು. ಶಾಸಕ ಎಂದ ಮಾತ್ರಕ್ಕೆ ಏನು ಮಾಡಿದರೂ ಗೆದ್ದುಕೊಳ್ಳಬಲ್ಲೆ ಎಂಬುದಕ್ಕೆ ಅವಕಾಶ ನೀಡಬಾರದು. ಆದ್ದರಿಂದ, ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದರೆ ಪ್ರಭಾವಿಯಾಗಿರುವುದರಿಂದ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ದಟ್ಟವಾಗಲಿದೆ. ಅದನ್ನು ಚಿವುಟಿ ಹಾಕಬೇಕು ಎಂದರು.
ಇದೇ ಕಾರಣಕ್ಕೆ ಶಿಕ್ಷೆಯಾದ ತಕ್ಷಣ ಚುನಾಯಿತ ಜನಪ್ರತಿನಿಧಿಗಳಿಗೆ ಅನರ್ಹತೆಯಿಂದ ರಕ್ಷಣೆ ಒದಗಿಸಿದ್ದ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 8(4) ಅನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಟಕ್ಕೆ ವಿವರಿಸಿದರು.
ಆಗ ನ್ಯಾಯಪೀಠ, ಅದು ಸತ್ಯ. ಇಂಥ ಘೋರ ಕೃತ್ಯಗಳನ್ನು ಒಪ್ಪಲಾಗದು. ಇಲ್ಲಿ, ಅಲ್ಲಿ ಎಂದೇನು ಇಲ್ಲ. ಇದು ಎಲ್ಲ ಕಡೆ ಇದ್ದು, ಕೆಲವು ಕಾರಣಗಳಿಗೆ ಕೆಲವು ಸಂದರ್ಭದಲ್ಲಿ ಕೆಲವರು ಪಾರಾಗುತ್ತಾರೆ. ಕೆಲವರು ಆರೋಪಿಗಳಾದರೂ ಕೆಲವರು ಮಾತ್ರ ಶಿಕ್ಷೆಗೆ ಗುರಿಯಾಗುತ್ತಾರೆ. ಕೆಲವು ಪ್ರಕರಣಗಳಲ್ಲಿ ಇದನ್ನು ಲಘುವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ, ಆರೋಪಿಗಳ ಸಂಪರ್ಕ ಕಾರಣ ಇರಬಹುದು, ಗೊತ್ತಿಲ್ಲ. ಸರ್ಕಾರಿ ಸೇವಕರು ಅಥವಾ ಅತ್ಯುನ್ನತ ರಾಜಕೀಯ ಪ್ರಭಾವಿಗಳು ಭಾಗಿಯಾಗಿರುವ ವಿಚಾರವನ್ನು ಉಲ್ಲೇಖಿಸಿದ್ದೇವೆ. ಇದೇ ಕಾರಣಕ್ಕೆ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಸರ್ಕಾರಕ್ಕೂ ಇಷ್ಟವಿರುವುದಿಲ್ಲ ಎಂದು ಹೇಳಿತು.
ಇದಕ್ಕೆ ಸಹಮತಿಸಿದ ರಾಜು ಅವರು, ಭ್ರಷ್ಟ ರಾಜಕಾರಣಿಗಳನ್ನು ಸರ್ಕಾರಗಳೇ ರಕ್ಷಿಸಿರುವ ಸಾಕಷ್ಟು ಪ್ರಕರಣಗಳಿವೆ. ಸರ್ಕಾರ ಬದಲಾದ ತಕ್ಷಣ ಪ್ರಾಸಿಕ್ಯೂಷನ್ಗೆ ಅನುಮತಿಸಿದ್ದನ್ನು ಹಿಂಪಡೆದಿರುವ ಐತಿಹ್ಯಗಳೂ ಇವೆ ಎಂದರು.
ಪ್ರಕರಣದ ಭಾಗಶಃ ವಿಚಾರಣೆ ನಡೆಸಿರುವ ನ್ಯಾಯಪೀಠ, ಸಮಯದ ಅಭಾವದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)