ಬಿಕ್ಲು ಶಿವ ಕೊಲೆ ಪ್ರಕರಣ; ಶಾಸಕ ಬೈರತಿ ಬಸವರಾಜ್ ಜಾಮೀನು ರದ್ದತಿಗೆ ಹೈಕೋರ್ಟ್ ನಕಾರ
- by Jagan Ramesh
- August 24, 2026
- 11 Views
ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಬೈರತಿ ಬಸವರಾಜ್ಗೆ ಜಾಮೀನು ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾರ್ಚ್ 12ರಂದು ಹೊರಡಿಸಿರುವ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ (ಸಿಐಡಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿತು. ಸರ್ಕಾರದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದ್ದು, ವಿಸ್ತೃತ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ರೌಡಿಶೀಟರ್ ಬಿಕ್ಲುಶಿವನ ಕೊಲೆ ಆರೋಪದಲ್ಲಿ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಮೃತನ ತಾಯಿ ವಿಜಯಲಕ್ಷ್ಮೀ ಆರೋಪಿಸಿದ್ದರು. ಆನಂತರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಇದರ ಬೆನ್ನಿಗೇ ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ ಹಾಗೂ ಇತರರ ವಿರುದ್ಧ ‘ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ’ (ಕೊಕಾ) ಅನ್ವಯಿಸಲು ಅನುಮತಿ ಕೋರಿತ್ತು. ಇದಕ್ಕೆ ಸರ್ಕಾರ 2025ರ ಆಗಸ್ಟ್ 2ರಂದು ಅನುಮತಿ ನೀಡಿತ್ತು. ಆನಂತರ, ಕೊಕಾ ಅನ್ವಯಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿದ್ದ ಹೈಕೋರ್ಟ್, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಆನಂತರ, 2026ರ ಫೆಬ್ರವರಿ 12ರಂದು ಸಿಐಡಿ ಅಧಿಕಾರಿಗಳು ಬಸವರಾಜ್ ಅವರನ್ನು ಬಂಧಿಸಿದ್ದರು.
ವಿಚಾರಣಾ ನ್ಯಾಯಾಲಯ ಮಾರ್ಚ್ 12ರಂದು ಬೈರತಿ ಬಸವರಾಜ್ಗೆ ಜಾಮೀನು ಮಂಜೂರು ಮಾಡಿತ್ತು. ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಪೊಲೀಸ್ ವಶದಲ್ಲಿಟ್ಟುಕೊಂಡು ನಡೆಸಿರುವ ವಿಚಾರಣೆ ಪೂರ್ಣಗೊಂಡಿದ್ದು, ಮತ್ತೆ ಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂಬ ಅಂಶ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಿಂದ ತಿಳಿಯಲಿದೆ. ಆದ್ದರಿಂದ, ಅರ್ಜಿದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ವಿಚಾರಣಾ ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು. ಈ ಆದೇಶ ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಇದೀಗ ಹೈಕೋರ್ಟ್ ವಜಾಗೊಳಿಸಿದೆ.
Related Articles
Thank you for your comment. It is awaiting moderation.


Comments (0)