ಯೆಮನ್ ಮೇಲೆ ಸೌದಿ ವಾಯುದಾಳಿ: 11 ಸಾವು, 36 ಮಂದಿಗೆ ಗಾಯ
- by Legal Samachar
- November 19, 2026
- 13 Views
ಸನಾ: ಯೆಮನ್ನ ವಿವಿಧ ಪ್ರಾಂತ್ಯಗಳ ಮೇಲೆ ಕಳೆದ 24 ಗಂಟೆಗಳಲ್ಲಿ ನಡೆದ ಸೌದಿ ವಾಯುದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದು, 36 ಜನರು ಗಾಯಗೊಂಡಿದ್ದಾರೆ ಎಂದು ಹೌತಿ ನಿಯಂತ್ರಿತ ಮಾಧ್ಯಮ ವರದಿ ಮಾಡಿದೆ.
ತೈಜ್, ಹೊದೈದಾ, ಸಾದಾ, ಹಜ್ಜಾ ಮತ್ತು ಇಬ್ ಪ್ರಾಂತ್ಯಗಳ ಜೊತೆಗೆ ರಾಜಧಾನಿ ಸನಾದ ವಿವಿಧ ಭಾಗಗಳ ಮೇಲೂ ದಾಳಿ ನಡೆದಿದೆ. ಸನಾದಲ್ಲಿ ಸ್ಫೋಟಗಳ ಸರಣಿ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನೊಂದೆಡೆ, ದಕ್ಷಿಣ ಸೌದಿ ಅರೇಬಿಯಾದತ್ತ ಹೌತಿಗಳು ಉಡಾಯಿಸಿದ ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆದು ನಾಶಪಡಿಸಿರುವುದಾಗಿ ಸೌದಿ ನೇತೃತ್ವದ ಮೈತ್ರಿಕೂಟ ಹೇಳಿದೆ. ಧಮಾರ್ ಮತ್ತು ಸಾದಾ ಪ್ರಾಂತ್ಯಗಳಲ್ಲಿನ ಹೌತಿ ಕ್ಷಿಪಣಿ ಉಡಾವಣಾ ವೇದಿಕೆಗಳನ್ನೂ ನಾಶಪಡಿಸಿರುವುದಾಗಿ ತಿಳಿಸಿದೆ.
ಗುರುವಾರ ರಿಯಾದ್ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಮುನ್ನೆಚ್ಚರಿಕೆ ಸಂದೇಶ ಹೊರಡಿಸಿ ಕೆಲವೇ ನಿಮಿಷಗಳಲ್ಲಿ ಹಿಂಪಡೆಯಲಾಗಿದೆ. ಬುಧವಾರ ರಿಯಾದ್ ವಿಮಾನ ನಿಲ್ದಾಣ ಮತ್ತು ಹಣಕಾಸು ಕೇಂದ್ರದ ಮೇಲೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದರು.
ಸೌದಿ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸರಿಯಾ ತಿಳಿಸಿದ್ದಾರೆ.


Comments (0)