ಬೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಎಚ್. ವಿಶ್ವನಾಥ್ ವಿರುದ್ಧದ ಮಾನನಷ್ಟ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣದ ಸಂಬಂಧ ಸಚಿವ ಬೈರತಿ ಸುರೇಶ್ ವಿರುದ್ಧ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಸಚಿವ ಅಡಗೂರು ಎಚ್‌. ವಿಶ್ವನಾಥ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಸಾರಿಗೆ ಸಚಿವ ಬಿ.ಎಸ್. ಸುರೇಶ್ (ಬೈರತಿ ಸುರೇಶ್‌) ಹೂಡಿರುವ 50 ಕೋಟಿ ರೂ. ಸಿವಿಲ್‌ ಮಾನನಷ್ಟ ಮೊಕದ್ದಮೆ ಸಂಬಂಧ ಬೆಂಗಳೂರಿನ 42ನೇ ಹೆಚ್ಚುವರಿ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಎಚ್‌. ವಿಶ್ವನಾಥ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ್‌ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಪಡಿಸಲು ನಿರಾಕರಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿತು. ಇದರಿಂದ, ವಿಶ್ವನಾಥ್‌ ಅವರು ವಿಚಾರಣೆಯನ್ನು ಎದುರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ.

ಪ್ರಕರಣವೇನು?
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥ್‌ ಹಲವು ಬಾರಿ ಮಾಧ್ಯಮಗೋಷ್ಠಿಯಲ್ಲಿ ಸುರೇಶ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬೈರತಿ ಸುರೇಶ್‌ ಒಬ್ಬ ರಿಯಲ್‌ ಎಸ್ಟೇಟ್‌ ಗಿರಾಕಿ ಎಂಬುದೂ ಸೇರಿದಂತೆ ಹಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಆ ಹಿನ್ನೆಲೆಯಲ್ಲಿ ಸಚಿವ ಸುರೇಶ್‌, ವಿಶ್ವನಾಥ್‌ ಅವರಿಂದ 50 ಕೋಟಿ ಪರಿಹಾರದ ಜತೆಗೆ ಯಾವುದೇ ಮಾನಹಾನಿ ನೀಡದಂತೆ ಶಾಶ್ವತ ಪ್ರತಿಬಂಧಕಾದೇಶ ಹೊರಡಿಸಲು ಕೋರಿ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದರು. ಆ ಪ್ರಕರಣದಲ್ಲಿ ನ್ಯಾಯಾಲಯ ವಿಶ್ವನಾಥ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಜತೆಗೆ, ಬೈರತಿ ಸುರೇಶ್‌ ವಿರುದ್ಧ ಯಾವುದೇ ಮಾನಹಾನಿ ಹೇಳಿಕೆ ನೀಡಿದಂತೆ ವಿಶ್ವನಾಥ್‌ ವಿರುದ್ಧ ಪ್ರತಿಬಂಧಕಾದೇಶ ಹೊರಡಿಸಿರುವುದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

 

Related Articles

Comments (0)

Leave a Comment