ಸಮಾಜದ ಶಾಂತಿ ಕದಡುವ ಪೋಸ್ಟ್ ಹಾಕುವುದರಿಂದ ಪ್ರಗತಿ ಸಾಧ್ಯವಿಲ್ಲ, ಸೌಹಾರ್ದತೆಯಿಂದ ಬದುಕುವುದೇ ಅತ್ಯುತ್ತಮ ವಿಧಾನ; ಹೈಕೋರ್ಟ್

ಬೆಂಗಳೂರು: ಸೌಹಾರ್ದತೆಯಿಂದ ಬದುಕುವುದೇ ಯಾವುದೇ ಮನುಷ್ಯ ಬದುಕುವ ಅತ್ಯುತ್ತಮ ವಿಧಾನವಾಗಿದೆ. ಸೌಹಾರ್ದತೆ ಕದುಡುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವುದರಿಂದ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಮಾರ್ಮಿಕವಾಗಿ ನುಡಿದಿದೆ.

ರಸ್ತೆಯಲ್ಲಿ ನಮಾಜ್‌ ಮಾಡಿದ ಪ್ರಕರಣದಲ್ಲಿ 24 ಗಂಟೆಯಲ್ಲೇ ಬಿ ರಿಪೋರ್ಟ್‌ ಹಾಕಿದ ಪೊಲೀಸರ ಕ್ರಮ ಪ್ರಶ್ನಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಹಿನ್ನೆಲೆಯಲ್ಲಿ ವಿವಿಧ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪದಲ್ಲಿ ಮಂಗಳೂರು ನಗರದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹಿಂದು ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್‌ ಸಲ್ಲಿಸಿದ್ದ ಅರ್ಜಿ ವಿಚಾಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದ ಮಂಡಿಸಿ, ರಸ್ತೆಯಲ್ಲಿ ನಮಾಜ್‌ ಮಾಡಿದ ಘಟನೆ ಬಗ್ಗೆ ಎಫ್‌ಐಆರ್‌ ದಾಖಲಿಸಿದ ಪೊಲೀಸರು, ಆ ಪ್ರಕರಣ ಕುರಿತಂತೆ 24 ಗಂಟೆಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಅದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬಕ್‌) ಕಾಮೆಂಟ್‌ ಮಾಡಿ ಪೋಸ್ಟ್‌ ಹಾಕಿರುವುದಕ್ಕೆ ಅರ್ಜಿದಾರರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಹೇಳಲಾಗಿರುವ ಅಪರಾಧದ ಅಂಶಗಳು ಅರ್ಜಿದಾರರಿಗೆ ಅನ್ವಯಿಸುವುದಿಲ್ಲ ಎಂದು ವಿವರಿಸಿದರು.

ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, ಅರ್ಜಿದಾರರು ಸಾಮಾಜಿಕ ಅಶಾಂತಿ ಮೂಡಿಸುವ ರೀತಿಯಲ್ಲಿ ಪೋಸ್ಟ್ ಹಾಕಿದ್ದಾರೆ. ಇದರಿಂದ ಕೋಮು ಸೌಹಾರ್ದತೆ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಮುಂದೆ ಮತ್ತೊಬ್ಬರು ಇನ್ನೊಂದು ಸಮುದಾಯದ ಸಂಪ್ರದಾಯ ಆಚರಣೆ ಬಗ್ಗೆ ಕಾಮೆಂಟ್‌ ಮಾಡಿದರೆ ಏನು ಸಂದೇಶ ರವಾನೆಯಾಗುತ್ತದೆ. ಆಗ ಕಾನೂನು ಸುವ್ಯವಸ್ಥೆ ಏನಾಗಬೇಡ? ಎಂದು ಕೇಳಿದರು.

ಇದೆಲ್ಲ ಮಾಡುವುದಾದರೂ ಏಕೆ?
ಆಗ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇದೆಲ್ಲ ಏಕೆ ಮಾಡುತ್ತಾರೆ? ಸೌಹಾರ್ದತೆಯಿಂದ ಬದುಕುವುದೇ ಯಾವುದೇ ಮನುಷ್ಯ ಬದುಕುವ ಅತ್ಯುತ್ತಮ ವಿಧಾನವಾಗಿದೆ. ಸೌಹಾರ್ದತೆಯನ್ನು ಏಕೆ ಹೀಗೆ ಕದುಡುವುದು? ಅವರ ಮೇಲೆ; ಇವರ ಮೇಲೆ ಏಕೆ ಕಾಮೆಂಟ್‌ ಮಾಡಬೇಕು? ಇದರಿಂದ ಯಾವ ಪ್ರಗತಿ ಸಾಧ್ಯವಾಗುತ್ತದೆ? ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ಮತ್ತೊಂದು ಗಳಿಸಲು ಹೀಗೆ ಮಾಡಲಾಗುತ್ತದೆ ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದುವರಿದು, ನಾನು ಯಾವುದೇ ಸಮುದಾಯವನ್ನು ಉದ್ದೇಶಿಸಿ ಹೇಳುತ್ತಿಲ್ಲ. ಆದರೆ, ಅನಾದಿ ಕಾಲದಿಂದ ಜನ ತಮ್ಮದೇ ಆದ ಹಬ್ಬ-ಸಂಪ್ರದಾಯ ಆಚರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಏಕೆ ಈಗ ಒಂದು ಸಮುದಾಯದ ಆಚರಣೆಯ ಬಗ್ಗೆ ಬೊಟ್ಟು ಮಾಡಿ ಹೇಳುವುದು? ಅರ್ಜಿದಾರರ ವಿರುದ್ಧ 20 ಕೇಸುಗಳು ದಾಖಲಾಗಿವೆ. ಏಕೆ ಇಷ್ಟು ಕೇಸ್‌ಗಳು ದಾಖಲಾಗಿವೆ? ಎಂದು ಪ್ರಶ್ನಿಸಿದರು.

ಅರ್ಜಿದಾರರ ಪರ ವಕೀಲರು, ಪೊಲೀಸರು ಸಾಮಾಜಿಕ ಪೋಸ್ಟ್‌ಗಳಿಗೆ ಮಾಡಿರುವ ವಿಚಾರಗಳಿಗೆ ಅನಗತ್ಯವಾಗಿ ಹಾಗೂ ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸದೆ ಹಲವು ಎಫ್‌ಐಆರ್‌ಗಳನ್ನು ದಾಖಲಿಸುತ್ತಿದ್ದಾರೆ. ಪ್ರಕರಣದಲ್ಲಿ ಯಾವುದೇ ಅಪರಾಧಿಕ ಅಂಶಗಳು ಇಲ್ಲ ಎಂದು ಪ್ರತಿಪಾದಿಸಿದರು.

ಸರ್ಕಾರಿ ಅಭಿಯೋಜಕರು, ಇಂತಹ ಘಟನೆಗಳಿಂದ ಬಂದ್‌ ಮಾಡಲಾಗುತ್ತದೆ. ಅದರಿಂದ, ಸರ್ಕಾರದ ಬೊಕ್ಕಸಕ್ಕೆ ಎಷ್ಟೊಂದು ನಷ್ಟ ಉಂಟಾಗುತ್ತದೆ. ಇದನ್ನೇ ಅವರು ಬಯಸುತ್ತಾರೆ. ಇಂತಹ ಬೆಳವಣಿಗೆಗಳೇ ಆ ಭಾಗದಲ್ಲಿ (ಮಂಗಳೂರು) ನಡೆಯುತ್ತಿದೆ. ಕಾನೂನು ಸುವ್ಯವಸ್ಥೆಯು ಬಹುಮುಖ್ಯ ವಿಚಾರವಾಗಿದೆ. ಪ್ರಕರಣ ಕುರಿತು ತನಿಖೆ ಮುಂದುವರಿಸಲು ನ್ಯಾಯಾಲಯ ಅನುಮತಿಸಬೇಕು. ಪ್ರಕರಣದಲ್ಲಿ ಯಾವುದೇ ಅಪರಾಧದ ಅಂಶಗಳು ಇಲ್ಲವಾದರೆ, ಪೊಲೀಸರು ಬಿ ರಿಪೋಟ್‌ ಸಲ್ಲಿಸುತ್ತಾರೆ. ನನ್ನ ಈ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಬಹುದು ಎಂದರು.

ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿತಲ್ಲದೆ, ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ ನೀಡಿ ಹೊರಡಿಸಲಾಗಿರುವ ಮಧ್ಯಂತರ ತಡೆಯಾಜ್ಞೆಯನ್ನು ತೀರ್ಪು ಪ್ರಕಟಿಸುವವರೆಗೆ ಮುಂದುವರಿಸಿತು.

Related Articles

Comments (0)

Leave a Comment