ಜಾತಿ ಪ್ರದರ್ಶಿಸಿಕೊಂಡು ಯಾರೂ ರೆಸಾರ್ಟ್ ಪ್ರವೇಶಿಸುವುದಿಲ್ಲ; ರೆಸಾರ್ಟ್ ಮಾಲೀಕರ ವಿರುದ್ಧದ ಜಾತಿ ನಿಂದನೆ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
- by Jagan Ramesh
- September 2, 2026
- 9 Views
ಬೆಂಗಳೂರು: ರೆಸಾರ್ಟ್ಗೆ ತೆರಳುವ ಯಾವ ಅತಿಥಿಯೂ ತಮ್ಮ ಜಾತಿ ಪ್ರದರ್ಶಿಸಿಕೊಂಡು ತೆರಳುವುದಿಲ್ಲ ಎಂದಿರುವ ಹೈಕೋರ್ಟ್, ಮಡಿಕೇರಿಯ ರೆಸಾರ್ಟ್ ಒಂದರ ಮಾಲೀಕರು ಹಾಗೂ ನೌಕರರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ಮಹಿಳೆಯೊಬ್ಬರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ಇದೇ ವೇಳೆ, ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದಡಿಯ ಪ್ರಕರಣ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದೆ.
ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸ್ಕೈಲಾರ್ಕ್ ರೆಸಾರ್ಟ್ ಮಾಲೀಕರಾದ ಎ.ಕೆ. ಮುತ್ತಪ್ಪ, ಅವರ ಪತ್ನಿ ಕೆ.ಸಿ. ರೀಟಾ, ಪುತ್ರಿ ಎ.ಎಂ. ಮೋನಿಷಾ ಹಾಗೂ ವ್ಯವಸ್ಥಾಪಕ ಎನ್.ಪಿ. ಲಿಕ್ಕಿನ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಎಸ್ಸಿ, ಎಸ್ಟಿ ಕಾಯ್ದೆ ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿರುವ ನ್ಯಾಯಪೀಠ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 78 (ಮಹಿಳೆಗೆ ಇಷ್ಟವಿಲ್ಲದಿದ್ದರೂ ಆಕೆಯನ್ನು ಪದೇಪದೆ ಸಂಪರ್ಕಿಸಲು ಪ್ರಯತ್ನಿಸುವ ಅಥವಾ ಹಿಂಬಾಲಿಸುವ) ಹಾಗೂ ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ) ಅಡಿಯ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ. ಈ ಆರೋಪಗಳ ಸತ್ಯಾಸತ್ಯತೆಯು ಪೂರ್ಣಪ್ರಮಾಣ ತನಿಖೆಯ ನಂತರವಷ್ಟೇ ಹೊರಬರಬೇಕಿದೆ ಎಂದಿರುವ ನ್ಯಾಯಪೀಠ, ಈ ಆರೋಪಗಳಿಗೆ ಸಂಬಂಧಿಸಿದಂತೆ ಅಂತಿಮ ವರದಿಯು ಅರ್ಜಿದಾರರ ವಿರುದ್ಧ ಬಂದಲ್ಲಿ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಲು ಅವರಿಗೆ ಸ್ವಾತಂತ್ರ್ಯ ಕಾಯ್ದಿರಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದೆ.
ಜಾತಿ ಪ್ರದರ್ಶಿಸಿಕೊಂಡು ಹೋಗುವುದಿಲ್ಲ:
ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅರ್ಜಿದಾರರ ಮಾಲೀಕತ್ವದ ರೆಸಾರ್ಟ್ಗೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ, ಅವರಿಗೆ ಒದಗಿಸಲಾಗಿದ್ದ ಕೊಠಡಿಯ ವಿಚಾರವಾಗಿ ರೆಸಾರ್ಟ್ನ ನೌಕರರು, ಆಡಳಿತ ಮಂಡಳಿಯ ಜತೆ ವಾಗ್ವಾದ ನಡೆದಿತ್ತು. ಆ ಸಂದರ್ಭದಲ್ಲಿ ಅರ್ಜಿದಾರರು ದೂರುದಾರರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ, ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಡಬ್ಲ್ಯು)(ii) ರ ಅಡಿಯಲ್ಲಿ ಅಪರಾಧದ ಅಂಶಗಳಾಗುತ್ತವೆ ಎಂಬುದು ಅರ್ಜಿದಾರ ವಾದವಾಗಿದೆ. ಆದರೆ, ಯಾವ ಅತಿಥಿಯೂ ತಮ್ಮ ಜಾತಿಯನ್ನು ಪ್ರದರ್ಶಿಸಿಕೊಂಡು ರೆಸಾರ್ಟ್ ಪ್ರವೇಶಿಸುವುದಿಲ್ಲ. ರೆಸಾರ್ಟ್ಗೆ ಪ್ರವೇಶಿಸುವ ಪ್ರತಿಯೊಬ್ಬ ಅತಿಥಿಯೂ ಯಾವ ಜಾತಿಗೆ ಸೇರಿದವರಾಗಿರುತ್ತಾರೆ ಎನ್ನುವುದು ರೆಸಾರ್ಟ್ನ ಆಡಳಿತ ಮಂಡಳಿಗೆ (ಅರ್ಜಿದಾರರಿಗೆ) ತಿಳಿದಿರುವುದಿಲ್ಲ ಎನ್ನುವುದು ಸ್ಪಷ್ಟ ಹಾಗೂ ಸರಳ ವಿಚಾರವಾಗಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಆರೋಪವು ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ನಿಜವಾಗಿ ಸಮಸ್ಯೆಗೊಳಗಾದವರೂ ಬರುವುದಿಲ್ಲ:
ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ರೆಸಾರ್ಟ್ಗೆ ದೂರುದಾರೆ ಅತಿಥಿಯಾಗಿ ಬಂದಿದ್ದರು. ರೂಂ ವಿಚಾರವಾಗಿ ಸರ್ವೀಸ್ ಬಾಯ್ ಜತೆ ವಾಗ್ವಾದ ನಡೆಸಿದ್ದರು. ಸಮಸ್ಯೆ ಬಗೆಹರಿಸಲು ಮಾಲೀಕರು ಅಲ್ಲಿಗೆ ತೆರಳಿದ್ದರು. ದೂರುದಾರೆಗೆ ಪ್ರೀಮಿಯಂ ದರ್ಜೆಯ ರೂಂ ನೀಡಲಾಗುವುದು, ಊಟದ ಬಿಲ್ ಮನ್ನಾ ಮಾಡುವುದಾಗಿ ಅರ್ಜಿದಾರರು ಹೇಳಿದ್ದರು. ಹೀಗಿದ್ದರೂ, ರೆಸಾರ್ಟ್ನಿಂದ ಹೊರ ನಡೆದ ಆಕೆ ರೆಸಾರ್ಟ್ ಮಾಲೀಕರು ಹಾಗೂ ನೌಕರರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಿಸಿದ್ದಾರೆ. ಮೇಲಾಗಿ ರೆಸಾರ್ಟ್ಗೆ ಅತಿಥಿಯಾಗಿ ಬಂದಿದ್ದ ಮಹಿಳೆ ಗುರುತಿಗಾಗಿ ಆಧಾರ್ ಕಾರ್ಡ್ ನೀಡಿದ್ದರೇ ಹೊರತು ಜಾತಿ ಪ್ರಮಾಣಪತ್ರವನ್ನಲ್ಲ ಎಂದರು.
ಈ ವೇಳೆ ನ್ಯಾಯಪೀಠ ದೂರುದಾರರ ಪರ ವಕೀಲರನ್ನು ಕುರಿತು, ಜಾತಿ ನೋಡಿ ಒಳಗೆ ಬಿಡುತ್ತಾರೆಯೇ? ನೀವು ಪರಿಶಿಷ್ಟ ಜಾತಿಗೆ ಸೇರಿದವರೆಂದು ಅರ್ಜಿದಾರರಿಗೆ ಹೇಗೆ ಗೊತ್ತು? ಎಂದು ಪ್ರಶ್ನಿಸಿತು. ದೂರುದಾರೆಯ ಪರ ವಕೀಲರು, ಮೊದಲಿಗೆ ಸರ್ವೀಸ್ ಬಾಯ್ ಜತೆ ವಾಗ್ವಾದ ನಡೆಯುತ್ತದೆ. ಈ ವೇಳೆ ಅಲ್ಲಿಗೆ ಬಂದ ಮಾಲೀಕರು ಸಹ, “ನೀವು ಯಾವ ಜಾತಿಯೆಂದು ನಿಮ್ಮ ಮುಖ ನೋಡಿದರೆ ಹೇಳಬಹುದು” ಎಂದಿದ್ದರು ಎಂದು ತಿಳಿಸಿದರು. ಇದನ್ನೊಪ್ಪದ ನ್ಯಾಯಪೀಠ, ರೆಸಾರ್ಟ್ಗೆ ಕಾಲಿಟ್ಟ ತಕ್ಷಣ ಅಲ್ಲಿನ ಮಾಲೀಕರು, ಕೆಲಸಗಾರರು ಯಾವ ಜಾತಿ ಎಂದು ನಿಮಗೆ ತಿಳಿದುಬಿಡುತ್ತದೆಯೇ ಅಥವಾ ನೀವು ಯಾವ ಜಾತಿಗೆ ಸೇರಿದವರೆಂದು ಅವರಿಗೆ ತಿಳಿಯುತ್ತದೆಯೇ? ಎಂದು ಪ್ರಶ್ನಿಸಿತಲ್ಲದೆ, ಇದನ್ನೆಲ್ಲ ನಿಲ್ಲಿಸಿ, ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಈ ರೀತಿ ಮಾಡುತ್ತಿರುವುದರಿಂದಲೇ ನಿಜವಾಗಿ ತೊಂದರೆಗೊಳಗಾದವರೂ ಕೋರ್ಟ್ ಮುಂದೆ ಬರದಂತಾಗಿದೆ ಎಂದು ಮೌಖಿಕವಾಗಿ ನುಡಿಯಿತು.
Related Articles
Thank you for your comment. It is awaiting moderation.


Comments (0)