ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ನೇಮಕಾತಿ ಕೈಗೊಳ್ಳದ ಬಗ್ಗೆ ಸರ್ಕಾರದ ವಿವರಣೆ ಕೇಳಿದ ಹೈಕೋರ್ಟ್; ನೇಮಕಾತಿ ಅಧಿಸೂಚನೆಗೆ ತಡೆ ನೀಡಲು ನಕಾರ
- by Jagan Ramesh
- August 26, 2026
- 6 Views
ಬೆಂಗಳೂರು: ರಾಜ್ಯದಲ್ಲಿ ಸುಮಾರು 15 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ಉರ್ದು ಸೇರಿದಂತೆ ಇತರ ಅಲ್ಪಸಂಖ್ಯಾತ ಭಾಷೆಗಳ ಶಿಕ್ಷಕರ ನೇಮಕ ಹುದ್ದೆಗಳನ್ನು ನೇಮಕಾತಿ ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸರ್ಕಾರ ಆಗಸ್ಟ್ 11ರಂದು ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿ ಹುಬ್ಬಳ್ಳಿಯ ನೇಕಾರ ನಗರದ ಉರ್ದು ಭಾಷಾ ಶಿಕ್ಷಕಿ ಅಸ್ಮಾ ಘೋರಿ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ಉರ್ದು ಮಾಧ್ಯಮ ಶಾಲೆಗಳೂ ಸೇರಿ ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಸರ್ಕಾರ ಆಯ್ಕೆ ಪ್ರಕ್ರಿಯೆಯನ್ನು ಏಕೆ ಕೈಗೊಂಡಿಲ್ಲ ಎಂಬುದರ ಕುರಿತು ಮುಂದಿನ ವಿಚಾರಣೆ ವೇಳೆ ಪ್ರತಿಕ್ರಿಯಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿತು.
ಇದೇ ವೇಳೆ, ಕನ್ನಡ ಅಥವಾ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವ ಶಾಲೆಗಳಲ್ಲಿ ಕೆಲವು ಖಾಲಿ ಹುದ್ದೆಗಳಿವೆ ಎಂದು ತೋರುತ್ತದೆ. ಸರ್ಕಾರ ಆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ಉರ್ದು ಶಾಲೆಗಳಲ್ಲಿ ನೇಮಕಾತಿ ಏಕೆ ನಡೆಯುತ್ತಿಲ್ಲ ಎಂಬುದು ಕಾನೂನುಬದ್ಧ ಪ್ರಶ್ನೆಯಾಗಿದೆ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.
ಅಧಿಸೂಚನೆಗೆ ತಡೆ ನೀಡಲು ನಕಾರ:
ವಿಚಾರಣೆ ವೇಳೆ, ನೇಮಕಾತಿ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಪರ ವಕೀಲರ ಮನವಿ ತಳ್ಳಿಹಾಕಿದ ನ್ಯಾಯಪೀಠ, ಈ ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ. ಯಾವುದೇ ಮಧ್ಯಂತರ ಆದೇಶವಿಲ್ಲದಿದ್ದರೆ ಮತ್ತು ನೀವು ಅಂತಿಮವಾಗಿ ಅರ್ಜಿಯಲ್ಲಿ ಯಶಸ್ವಿಯಾದರೆ, ಸರ್ಕಾರ ಕೈಗೊಂಡ ನೇಮಕಾತಿಯನ್ನು ರದ್ದುಗೊಳಿಸಬೇಕೇ? ಹಾಗೆ ಆಗುವುದಿಲ್ಲ. ನೀವು ಯಶಸ್ವಿಯಾದರೆ, ಉರ್ದು ಶಾಲೆಗಳಿಗೂ ನೇಮಕಾತಿಗೆ ನಿರ್ದೇಶನ ನೀಡಬಹುದಷ್ಟೇ. ಅದಕ್ಕೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗದು ಎಂದು ಹೇಳಿತು.
ಅರ್ಜಿದಾರರ ಮನವಿ ಏನು?
ಕನ್ನಡ ಅಥವಾ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿದ್ದ ಶಾಲೆಗಳಲ್ಲಿ ಖಾಲಿ ಹುದ್ದೆಗಳಿದ್ದರೂ, ನೇಮಕಾತಿ ಅಧಿಸೂಚನೆಯು ಉರ್ದು ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿದೆ. ಈ ಕ್ರಮವು ಕರ್ನಾಟಕ ಶಿಕ್ಷ ಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ)(ತಿದ್ದುಪಡಿ) ನಿಯಮಗಳು- 2026 ಮತ್ತು ಸಂವಿಧಾನದ 19, 21, 29(1) ಮತ್ತು 350ಅ ವಿಧಿಗಳ ಅಡಿಯಲ್ಲಿ ಸಾಂವಿಧಾನಿಕ ಖಾತ್ರಿಗಳನ್ನು ಉಲ್ಲಂಘಿಸುತ್ತದೆ ಎಂದು ಆಕ್ಷೇಪಿಸಿರುವ ಅರ್ಜಿದಾರರು, ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು ಅಥವಾ ಪರ್ಯಾಯವಾಗಿ ಉರ್ದು ಮಾಧ್ಯಮ ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಹುದ್ದೆಗಳನ್ನು ಪರಿಗಣಿಸದೆ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸದಂತೆ ಪ್ರತಿವಾದಿಗಳನ್ನು ತಡೆಯುವ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
Related Articles
Thank you for your comment. It is awaiting moderation.


Comments (0)