ಸರ್ಕಾರ ಈಗಾಗಲೇ ವಾಗ್ದಾನ ನೀಡಿದೆ, ಆತಂಕ ಬೇಡ; ಬಿಡದಿ ಟೌನ್ಶಿಪ್ ಭೂಸ್ವಾಧೀನ ಪ್ರಶ್ನಿಸಿದ ರೈತರಿಗೆ ಹೈಕೋರ್ಟ್ ಅಭಯ
- by Jagan Ramesh
- August 25, 2026
- 8 Views
ಬೆಂಗಳೂರು: ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ಗಾಗಿ (ಬಿಡದಿ ಟೌನ್ಶಿಪ್) ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಬಿದ್ದಿದ್ದರೂ ಪರಿಹಾರ ನಿಗದಿ ಮಾಡುವವರೆಗೆ ಭೂಸ್ವಾಧೀನ ಮಾಡುವುದಿಲ್ಲವೆಂದು ಸರ್ಕಾರ ವಾಗ್ದಾನ ನೀಡಿರುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ, ಮರ ಕಡಿಯುತ್ತಾರೆಂಬ ಆತಂಕಪಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಭೂಸ್ವಾಧೀನ ಪ್ರಶ್ನಿಸಿ ಹೊಸೂರು ಗ್ರಾಮದ ರೈತ ಮಹಿಳೆ ಗಿರಿಜಮ್ಮ ಸೇರಿ ಹಲವು ರೈತರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಅರ್ಜಿದಾರರ ಪರ ವಕೀಲರು, ಸರ್ಕಾರ ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ ರೈತರನ್ನು ಒಕ್ಕಲೆಬ್ಬಿಸುವ ಮತ್ತು ಮರಗಳನ್ನು ಕತ್ತರಿಸುವ ಸಾಧ್ಯತೆ ಇದೆ. ಆದ್ದರಿಂದ, ಭೂಸ್ವಾಧೀನ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದರು.
ಆಗ ನ್ಯಾಯಪೀಠ, ಅದು ಹೇಗೆ ಸಾಧ್ಯ? ಭೂಸ್ವಾಧೀನಕ್ಕೆ ಪರಿಹಾರ ನಿಗದಿಪಡಿಸಿ ‘ಐ’ತೀರ್ಪು ನೀಡಿಲ್ಲ. ಪರಿಹಾರ ನಿಗದಿಯಾಗುವವರೆಗೂ ಅರ್ಜಿದಾರರ ಸ್ವತ್ತು ಸ್ವಾಧೀನ ಮಾಡುವುದಿಲ್ಲ, ಯಾರನ್ನೂ ತೆರವುಗೊಳಿಸುವುದಿಲ್ಲವೆಂದು ಈಗಾಗಲೇ ಸರ್ಕಾರ ವಾಗ್ದಾನ ನೀಡಿದೆ. ಅದನ್ನು ಹೇಗೆ ಉಲ್ಲಂಘಿಸಲು ಸಾಧ್ಯ. ಹಾಗೇನಾದರೂ ಸರ್ಕಾರ ಮಾಡಲು ಮುಂದಾದರೆ ಒಂದು ಮರವನ್ನೂ ಸಹ ಕತ್ತರಿಸಲು, ಒಂದು ಇಟ್ಟಿಗೆಯನ್ನೂ ಸಹ ಎತ್ತಲು ಅವಕಾಶ ನೀಡಲಾಗದು ಎಂದು ಮೌಖಿಕವಾಗಿ ಹೇಳಿತು.
ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಈ ಹಿಂದಿನ ವಿಚಾರಣೆ ವೇಳೆ ನೀಡಿರುವ ವಾಗ್ದಾನಕ್ಕೆ ಸರ್ಕಾರ ಬದ್ಧವಾಗಿದೆ. ಹಿಂದೆ ತಿಳಿಸಿರುವಂತೆ ಪರಿಹಾರ ನಿಗದಿಪಡಿಸುವವರೆಗೆ ರೈತರನ್ನು ತೆರವುಗೊಳಿಸುವುದಿಲ್ಲ. ಪರಿಹಾರ ನಿಗದಿಪಡಿಸಿದ ಬಳಿಕ ಹೈಕೋರ್ಟ್ಗೆ ಮಾಹಿತಿ ನೀಡಲಾಗುವುದು. ಹೈಕೋರ್ಟ್ ಗಮನಕ್ಕೆ ತಂದ ಬಳಿಕವೇ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಆಗ ನ್ಯಾಯಪೀಠ ಅರ್ಜಿದಾರರನ್ನು ಕುರಿತು, ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ವಾಗ್ದಾನದಂತೆ ರಾತ್ರೋರಾತ್ರಿ ಪರಿಹಾರ ನಿಗದಿಪಡಿಸಿ, ಮರ ಕಡಿಯುವುದಿಲ್ಲ. ಆದ್ದರಿಂದ, ಆತಂಕಪಡಬೇಕಾಗಿಲ್ಲ ಎಂದು ಹೇಳಿತು. ಜತೆಗೆ, ಸರ್ಕಾರದ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಿಕೊಂಡ ನ್ಯಾಯಪೀಠ, ಭೂಸ್ವಾಧೀನ ಮಾಡಿಕೊಂಡು ರೈತರನ್ನು ತೆರವುಗೊಳಿಸುವ ಮುನ್ನ ಸರ್ಕಾರ ತಾನು ಕೈಗೊಂಡ ಪರಿಹಾರ ನಿಗದಿ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.


Comments (0)