ಯಾರನ್ನಾದರೂ ಬಂಧಿಸುವುದು ಪೊಲೀಸರಿಗೆ ಜೋಕ್ ಆಗಿಬಿಟ್ಟಿದೆ; ವ್ಯಕ್ತಿಯೊಬ್ಬರ ಅಕ್ರಮ ಬಂಧನಕ್ಕೆ ಹೈಕೋರ್ಟ್ ಕಿಡಿ

ಬೆಂಗಳೂರು: ನಿರ್ದಿಷ್ಟ ದಿನಾಂಕದಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ, ಆ ದಿನಾಂಕಕ್ಕೂ ಮೊದಲೇ ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ವಶಕ್ಕೆ ಪಡೆದ ವೈಟ್‌ಫೀಲ್ಡ್ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಪೊಲೀಸರಿಗೆ ಯಾರನ್ನಾದರೂ ಬಂಧಿಸುವುದು ತಮಾಷೆಯ ವಿಷಯವಾಗಿಬಿಟ್ಟಿದೆ ಎಂದು ಕಿಡಿಕಾರಿದೆ.

ಇದೇ ವೇಳೆ, ಕರ್ತವ್ಯಲೋಪವೆಸಗಿರುವ ಪೊಲೀಸ್ ಅಧಿಕಾರಿಯ ಖುದ್ದು ಹಾಜರಾತಿಗೆ ತಾಕೀತು ಮಾಡಿರುವ ಹೈಕೋರ್ಟ್, ತಪ್ಪಿತಸ್ಥ ಅಧಿಕಾರಿಗೆ ಭಾರಿ ಮೊತ್ತದ ದಂಡ ವಿಧಿಸುವುದಾಗಿ ಮೌಖಿಕವಾಗಿ ಹೇಳಿದೆ.

ಅಕ್ರಮ ಬಂಧವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ನಾಗರಿಕರನ್ನು ಯಾವುದೇ ಸೂಕ್ತ ಕಾರಣ ಅಥವಾ ಆಧಾರವಿಲ್ಲದೆ ಬಂಧಿಸಲಾಗುತ್ತಿರುವುದನ್ನು ಈ ನ್ಯಾಯಾಲಯ ಪದೇಪದೆ ಗಮನಿಸುತ್ತಿದೆ. ಈ ಪ್ರಕರಣವೂ ಅಂತಹ ಅಕ್ರಮ ಬಂಧನಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪೊಲೀಸರ ಕಾರ್ಯವೈಖರಿಯನ್ನು ಟೀಕಿಸಿತು.

ಪ್ರಕರಣದಲ್ಲಿ ಅರ್ಜಿದಾರರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ‌ಎನ್‌ಎ‌ಸ್‌ಎಸ್) ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ನೀಡಲಾಗಿದ್ದು, ನೋಟಿಸ್ ಪಡೆದವರು ತನಿಖೆಗೆ ಸಹಕರಿಸದಿದ್ದ ಸಂದರ್ಭದಲ್ಲಿ ಮಾತ್ರ ಬಂಧನ ಮಾಡಬಹುದಾಗಿದೆ. ಅರ್ಜಿದಾರರಿಗೆ ನೀಡಲಾದ ನೋಟಿಸ್‌ನಲ್ಲಿ ತನಿಖೆಯ ಉದ್ದೇಶಕ್ಕಾಗಿ ಆಗಸ್ಟ್ 27ರಂದು ಪೊಲೀಸರ ಮುಂದೆ ಹಾಜರಾಗುವಂತೆ ಸ್ಪಷ್ಟವಾಗಿ ನಿರ್ದೇಶಿಸಲಾಗಿದ್ದು, ಆ ದಿನಾಂಕವಿನ್ನೂ ಬರಬೇಕಿದೆ. ಆದರೂ, ಅರ್ಜಿದಾರರನ್ನು ವಶಕ್ಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಈ ಕೃತ್ಯ ಸಂಪೂರ್ಣ ಅಕ್ರಮವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿತು.

ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಯು ಗುರುವಾರ (ಆಗಸ್ಟ್ 27) ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗಬೇಕು ಹಾಗೂ ನಾಗರಿಕರ ಸ್ವಾತಂತ್ರ್ಯವನ್ನು ಈ ರೀತಿ ಹಗುರವಾಗಿ ಪರಿಗಣಿಸಿ ಕಾನೂನಿಗೆ ಸಂಪೂರ್ಣ ವಿರುದ್ಧವಾಗಿ ಎಸಗಿರುವ ಈ ಕೃತ್ಯಕ್ಕಾಗಿ ಅವರಿಗೆ ಏಕೆ ಭಾರಿ ಮೊತ್ತದ ದಂಡ ವಿಧಿಸಬಾರದು ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಆದೇಶಿಸಿತು.

ಅರ್ಜಿದಾರರ ಬಿಡುಗಡೆಗೆ ತಾಕೀತು:
ಸದ್ಯ ಅರ್ಜಿದಾರರನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಹಾಗೂ ಇತರ ವಿಷಯಗಳ ಕುರಿತಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಪ್ರಸ್ತುತ ಕಲಾಪ ನಡೆಯುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಒಂದು ವೇಳೆ ಅರ್ಜಿದಾರರನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದರೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದ ನ್ಯಾಯಪೀಠ, ಅರ್ಜಿದಾರರನ್ನು ತಕ್ಷಣವೇ ಕಸ್ಟಡಿಯಿಂದ ಬಿಡುಗಡೆ ಮಾಡಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿತು.

ಯಾರನ್ನಾದರೂ ಬಂಧಿಸುವುದು ಜೋಕ್ ಆಗಿಬಿಟ್ಟಿದೆ:
ತನಿಖಾಧಿಕಾರಿಯ ಮೇಲೆ 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಲಾಗುವುದು ಎಂದು ಮೌಖಿಕವಾಗಿ ನುಡಿದ ನ್ಯಾಯಪೀಠ, ಇದು ತುಂಬಾ ಭಯಾನಕವಾಗಿದೆ. ಪ್ರತಿದಿನ ಇದೇ ಒಂದು ಸಮಸ್ಯೆಯಾಗಿದೆ. ಪೊಲೀಸರು ತಾವು ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಇಲ್ಲಿ ಪೊಲೀಸರಿಗೆ ಯಾರನ್ನಾದರೂ ಬಂಧಿಸುವುದು ಒಂದು ಜೋಕ್ ಆಗಿಬಿಟ್ಟಿದೆ. ಪ್ರತಿದಿನ ಇಂತಹ ಪ್ರಕರಣಗಳನ್ನು ಗಮನಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಖಂಡಿತವಾಗಿಯೂ ಅಧಿಕಾರಿ ದಂಡ ತೆರಬೇಕಾಗುತ್ತದೆ ಎಂದು ಆಕ್ರೋಶದಿಂದ ನುಡಿಯಿತು.

ವೈಟ್‌ಫೀಲ್ಡ್ ಪೊಲೀಸರಿಂದ ಅಕ್ರಮ ಬಂಧನ:
ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಇದು ಕಳೆದ 16 ವರ್ಷಗಳಿಂದ ಎರಡು ಕುಟುಂಬಗಳ ನಡುವೆ ನಡೆಯುತ್ತಿರುವ ಸಿವಿಲ್ ವ್ಯಾಜ್ಯವಾಗಿದೆ. ದೂರುದಾರರು ನಕಲಿ ಎಂದು ಆರೋಪಿಸುತ್ತಿರುವ ವಿಲ್‌ಗೆ ಸಹಿ ಹಾಕಿದ್ದಾರೆ ಎಂಬ ಆರೋಪವಷ್ಟೇ ಅರ್ಜಿದಾರರ ಮೇಲಿದೆ. ಪ್ರಕರಣ ಸಂಬಂಧ ವೈಟ್‌ಫೀಲ್ಡ್ ಪೊಲೀಸರು ಬಿಎನ್‌ಎಸ್‌ಎಸ್ ಸೆಕ್ಷನ್ 35(3)ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ಮುಂಜಾನೆ ಅರ್ಜಿದಾರರನ್ನು ಠಾಣೆಗೆ ಕರೆದೊಯ್ದು ನೀಡಲಾದ ನೋಟಿಸ್‌ನಲ್ಲಿ ಆಗಸ್ಟ್ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಅದಕ್ಕೂ ಮೊದಲೇ (ಆಗಸ್ಟ್ 25) ಅವರನ್ನು ಅಕ್ರಮವಾಗಿ ವಶಕ್ಕೆ ಪಡೆದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಆಗಸ್ಟ್ 27ಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ, ಆಗಸ್ಟ್ 25ರಂದು ಅವರನ್ನು ಹೇಗೆ ವಶಕ್ಕೆ ಪಡೆಯಲು ಸಾಧ್ಯ? ಇದೆಂಥ ಅವಿವೇಕತನ? ನಿರ್ದಿಷ್ಟ ದಿನದಂದು ಹಾಜರಾಗಲು ನೋಟಿಸ್ ನೀಡಿದ ಮೇಲೆ ಆ ದಿನಾಂಕ ಬರುವ ಮುನ್ನವೇ ವಶಕ್ಕೆ ಪಡೆಯುವ ಅಗತ್ಯವೇನಿತ್ತು? ಅರ್ಜಿದಾರರನ್ನು ವಶಕ್ಕೆ ಪಡೆದ ಅಧಿಕಾರಿ ಯಾರು ಎಂದು ಪ್ರಶ್ನಿಸಿತು. ಸರ್ಕಾರದ ಪರ ವಕೀಲರು, ಅಧಿಕಾರಿಯ ಖುದ್ದು ಹಾಜರಾತಿಗೆ ಸೂಚಿಸಬಹುದು ಎಂದರು.

Related Articles

Comments (0)

Leave a Comment