ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಆರೋಪಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ
- by Prashanth Basavapatna
- August 19, 2026
- 8 Views
ಬೆಂಗಳೂರು: ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ವಿವಾಹಿತ ವ್ಯಕ್ತಿಯೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ನೆಲಮಂಗಲದ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಕೋರ್ಟ್ನಲ್ಲಿರುವ ಪ್ರಕರಣ ರದ್ದು ಕೋರಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿಯ ಬೆಟ್ಟದಹಳ್ಳಿ ನಿವಾಸಿ ಜಿ. ನವೀನ್ (33) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.
ಪ್ರಕರಣದಲ್ಲಿ ದೂರು ಮತ್ತು ದೋಷಾರೋಪ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿದಾಗ, ಯುವತಿ ಆತ್ಮಹತ್ಯೆಗೆ ಮುಂದಾಗಲು ಆರೋಪಿಯ ನಡವಳಿಕೆ ಸಾಕಷ್ಟು ಇಂಬು ನೀಡುತ್ತದೆ. ಆಕೆ ಅವನನ್ನು ಪ್ರೀತಿಸಲು ನಿರಾಕರಿಸಿದ್ದಳು, ಆಕೆಯ ಖಾಸಗಿತನಕ್ಕೆ ಧಕ್ಕೆ ತರಲಾಗಿತ್ತು, ಆಕೆಯ ಕೆಲಸದ ಸ್ಥಳದಲ್ಲೂ ಅವಳನ್ನು ಹಿಂಬಾಲಿಸುವ ಮೂಲಕ ಅಡಚಣೆ ಉಂಟು ಮಾಡಲಾಗಿತ್ತು, ಆಕೆಯ ವಿವಾಹದ ಸಾಧ್ಯತೆಗಳಿಗೆ ಪದೇಪದೆ ಭಂಗ ತರಲಾಗಿತ್ತು. ಇದರ ಪರಿಣಾಮ ನೆಮ್ಮದಿಯ ಜೀವನ ನಡೆಸಲು ಅವಕಾಶ ಸಿಗುವುದಿಲ್ಲ ಎಂಬ ಆತಂಕದಲ್ಲಿ ಆಕೆ ದಿನ ದೂಡುತ್ತಿದ್ದಳು. ಇವೆಲ್ಲ ಅಂಶಗಳು ಆರೋಪಿಯು ಆಕೆಯನ್ನು ಹಂತ ಹಂತವಾಗಿ ಇಕ್ಕಟ್ಟಿಗೆ ಸಿಲುಕಿಸಿದ್ದ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಅರ್ಜಿದಾರ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 108ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಅಗತ್ಯವಿರುವ ಅಂಶಗಳಾದ ಪ್ರಚೋದನೆ, ಕುಮ್ಮಕ್ಕು ಮತ್ತು ನಿಕಟವಾದ ಸಂಬಂಧಿತ ಸನ್ನಿವೇಶಗಳು ಸಂತ್ರಸ್ತೆಯ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಿವೆ ಎಂಬ ಆರೋಪಗಳನ್ನು ಪರಾಮರ್ಶೆ ಮಾಡಲು ಈ ಹಂತದಲ್ಲಿ ಆಗದು. ಇಂಥ ಪ್ರಕರಣಗಳಲ್ಲಿ ಕಂಡು ಬರುವ ಅಪರಾಧದ ಹೊಣೆಗಾರಿಕೆ, ಆರೋಪಿಯ ನಡವಳಿಕೆಗಳ ಒಟ್ಟಾರೆ ಪರಿಣಾಮದ ಮೇಲೆ ಹೇಗೆ ಅವಲಂಬಿತವಾಗಿತ್ತು ಎಂಬುದು ಸಮಗ್ರ ವಿಚಾರಣೆಯ ಮೂಲಕವೇ ಪರಿಶೀಲನೆಗೆ ಒಳಪಡಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ಹಂತದಲ್ಲಿ ಬಿಎನ್ಎಸ್ ಸೆಕ್ಷನ್ 75 (ಮಹಿಳೆಗೆ ಲೈಂಗಿಕ ಕಿರುಕುಳ) ಮತ್ತು 78 (ಮಹಿಳೆಗೆ ಇಷ್ಟವಿಲ್ಲದಿದ್ದರೂ ಆಕೆಯನ್ನು ಪದೇಪದೆ ಸಂಪರ್ಕಿಸಲು ಪ್ರಯತ್ನಿಸುವ ಅಥವಾ ಹಿಂಬಾಲಿಸುವ) ಅಗತ್ಯವಾದ ಅಂಶಗಳು ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಇಲ್ಲವೇ ಇಲ್ಲವೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದ್ದರಿಂದ, ವಿವಾದದ ಕೇಂದ್ರಬಿಂದು ಎನಿಸಿರುವ ಸೆಕ್ಷನ್ 108 ಅನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣವೇನು?
ಪ್ರಕರಣದ ದೋಷಾರೋಪ ಪಟ್ಟಿಯ ಪ್ರಕಾರ ಮೃತ ಯುವತಿ ಮೈಸೂರಿನಲ್ಲಿ ನರ್ಸಿಂಗ್ ಕೋರ್ಸ್ ಅಧ್ಯಯನ ಮಾಡುತ್ತಿದ್ದಳು. ಆಕೆಯ ತಂದೆ ತನ್ನ ಸ್ನೇಹಿತ ಗ್ಯಾರೆಹಳ್ಳಿಯ ಗಂಗರಾಜು ಅವರ ಮಗ ನವೀನ್ ಫೋನ್ ಮುಖಾಂತರ ಮಗಳಿಗೆ ಹಣವನ್ನು ಫೋನ್ ಪೇ ಮಾಡಿಸುತ್ತಿದ್ದರು. ದೂರವಾಣಿ ಮೂಲಕ ಪರಿಚಯ ಆರಂಭವಾಗಿ ಸಂಬಂಧ ಕ್ರಮೇಣ ಸಂಪೂರ್ಣ ಭಿನ್ನ ಸ್ವರೂಪವನ್ನು ಪಡೆದುಕೊಂಡಿತು. ನವೀನ್ ಮೃತ ಯುವತಿಯಲ್ಲಿ ಪ್ರೀತಿ ವ್ಯಕ್ತಪಡಿಸಿದ್ದಲ್ಲದೆ, ಆಕೆಯೂ ಅದಕ್ಕೆ ಪ್ರತಿಯಾಗಿ ಪ್ರೀತಿಸಬೇಕು ಹಾಗೂ ತನ್ನನ್ನು ವಿವಾಹವಾಗಬೇಕು ಎಂದು ಒತ್ತಾಯಿಸಿದ್ದ. ತಾನು ಸೂಚಿಸುತ್ತಿದ್ದ ಸ್ಥಳಗಳಲ್ಲಿ ಬಂದು ಭೇಟಿಯಾಗುವಂತೆ ಆಕೆಯನ್ನು ಪದೇಪದೆ ಒತ್ತಾಯಿಸಿದ್ದ. ಧರ್ಮಸ್ಥಳ ಹಾಗೂ ಇತರ ಸ್ಥಳಗಳಿಗೆ ತನ್ನೊಂದಿಗೆ ಬರುವಂತೆ ಆಕೆಯನ್ನು ಒಪ್ಪಿಸಿದ್ದ ಮತ್ತು ಈ ಸಂದರ್ಭಗಳಲ್ಲಿ ಅವರಿಬ್ಬರೂ ಒಟ್ಟಿಗಿರುವ ಫೋಟೋಗಳನ್ನು ಪಡೆದುಕೊಂಡಿದ್ದ.
ಯುವತಿ ತನಗೆ ಪ್ರೀತಿಯಲಿ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ನವೀನ್ ತನ್ನ ಪಟ್ಟು ಸಡಿಲಿಸಿರಲಿಲ್ಲ. ಆಕೆ ಕೆಲಸ ಮಾಡುತ್ತಿದ್ದ ಸ್ಥಳದವರೆಗೂ ಹಿಂಬಾಲಿಸಿ, ತನ್ನ ಮೋಟಾರ್ ಸೈಕಲ್ನಲ್ಲಿ ಬರುವಂತೆ ಒತ್ತಾಯಿಸುತ್ತಿದ್ದ. ಮದುವೆಗೆ ಪಟ್ಟು ಹಿಡಿದಿದ್ದ ಮತ್ತು ತನ್ನ ಬೇಡಿಕೆಗಳಿಗೆ ಒಪ್ಪದಿದ್ದರೆ ತನ್ನ ಬಳಿಯಿರುವ ಫೋಟೋಗಳನ್ನು ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ, ಆಕೆಗೆ ಬೇರೆಡೆ ಮದುವೆಯಾಗುವ ಸಾಧ್ಯತೆಗಳು ಕುಸಿದು ಬಿದ್ದವು. ಕಿರುಕುಳ ಅತಿಯಾಯಿತು ಎನಿಸಿದಾಗ ಆಕೆ ಪ್ರಾಣ ಕಳೆದುಕೊಳ್ಳುವ ಉದ್ದೇಶದಿಂದ ಮಾತ್ರೆಗಳನ್ನು ಸೇವಿಸಿದ್ದಳು. ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿತ್ತು. ಕುಟುಂಬದವರು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಿರಿಯರು ಮಧ್ಯಪ್ರವೇಶಿಸಿ, ನವೀನ್ಗೆ ಯುವತಿಯಿಂದ ದೂರ ಇರುವಂತೆ ಸಲಹೆ ನೀಡಿದ್ದರು. ಭರವಸೆಯ ಮೇರೆಗೆ ದೂರನ್ನು ಹಿಂಪಡೆಯಲಾಗಿತ್ತು.
ಮದುವೆಗೆ ಆಕೆಯನ್ನು ನೋಡಲು ವರನೊಬ್ಬ ಬಂದಾಗ ನವೀನ್ ತನ್ನ ಬಳಿಯಿದ್ದ ಫೋಟೋಗಳನ್ನು ತೋರಿಸಿ, ನನಗೂ ಆಕೆಗೂ ಸಂಬಂಧವಿತ್ತು ಎಂದು ತಿಳಿಸಿದ್ದ. ಇದರಿಂದ, ಮದುವೆ ಮಾತುಕತೆ ಮುರಿದುಬಿದ್ದಿತ್ತು. ಈ ರೀತಿ ಎರಡು ಬಾರಿ ನಡೆದ ಕಾರಣ ಆತನ ಬೆದರಿಕೆಗಳಿಂದ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಯುವತಿಯ ತಾಯಿ ನೀಡಿದ್ದ ದೂರು ಆಧರಿಸಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Related Articles
Thank you for your comment. It is awaiting moderation.


Comments (0)