ಸಾಲಬಾಧೆಯಿಂದ ರೈತ ಆತ್ಮಹತ್ಯೆ; ಮೃತನ ಕುಟುಂಬದ ಪರಿಹಾರ ಮನವಿ ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
- by Prashanth Basavapatna
- August 19, 2026
- 10 Views
ಬೆಂಗಳೂರು: ಸಾಲಬಾಧೆಯಿಂದ 2022ರ ಡಿಸೆಂಬರ್ ತಿಂಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಚಿನಕುರಳಿ ಹೋಬಳಿ ಬನ್ನಾಂಗಾಡಿ ಗ್ರಾಮದ ರೈತ ದೇವರಾಜು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವ ಕುರಿತ ಮನವಿಯನ್ನು ಒಂದು ತಿಂಗಳಲ್ಲಿ ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ರೈತ ದೇವರಾಜು ಆತ್ಮಹತ್ಯೆ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಗೆ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೃತರ ಪತ್ನಿ ವಸಂತಾ, ಪುತ್ರ ಬಿ.ಡಿ. ಯಶವಂತ ಹಾಗೂ ಪುತ್ರಿ ಸಿಂಚನಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸರ್ಕಾರಕ್ಕೆ ಈ ನಿದೇರ್ಶನ ನೀಡಿತು.
ಇದೇ ವೇಳೆ, ಪ್ರಕರಣದಲ್ಲಿ ಪರಿಹಾರ ಪಾವತಿಸಲು ವಿಳಂಬ ಮಾಡಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ, ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಯೋಜನೆಗಳ ಪ್ರಯೋಜನ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣವೇನು?
ಸಾಲ ಮಾಡಿ ಕೃಷಿ ಚಟುವಟಿಕೆ ನಡೆಸಿದ್ದ ದೇವರಾಜು ಬೆಳೆ ನಷ್ಟ ಅನುಭವಿಸಿದ್ದರು. ಇದರಿಂದ, ಸಾಲಬಾಧೆ ತಾಳಲಾರದೆ 2022ರ ಡಿಸೆಂಬರ್ 1ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತರ ಕಲ್ಯಾಣ ಪರಿಹಾರ ಯೋಜನೆಯಡಿ 5 ಲಕ್ಷ ರೂ. ಪರಿಹಾರ ನೀಡುವಂತೆ 2023ರ ಫೆಬ್ರವರಿ 7ರಂದು ದೇವರಾಜು ಪತ್ನಿ ವಸಂತಾ ಅವರು ಪಾಂಡವಪುರ ಟೌನ್ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದರು. ಮೂರು ವರ್ಷ ಕಳೆದಿದ್ದರೂ ಪರಿಹಾರ ಮಾತ್ರ ಪರಿಹಾರ ಬಿಡುಗಡೆಯಾಗಿರಲಿಲ್ಲ. ಇದರಿಂದ, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ವಸಂತಾ, 5 ಲಕ್ಷ ರೂ. ಪರಿಹಾರ ಬಿಡುಗಡೆಗೆ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಪಾಂಡವಪುರ ಟೌನ್ ತಹಶೀಲ್ದಾರ್ ಹಾಗೂ ಪಾಂಡವಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿದ್ದರು.
Related Articles
Thank you for your comment. It is awaiting moderation.


Comments (0)